ಗುಣಮಟ್ಟದ ಆರೋಗ್ಯ ಸೇವೆಗೆ ಮಣಿಪಾಲ ಆರೋಗ್ಯ ಕಾರ್ಡ್ ಸಹಕಾರಿ: ಡಾ. ಕೀರ್ತಿನಾಥ ಬಲ್ಲಾಳ

Update: 2021-09-28 17:31 GMT

ಕಾರ್ಕಳ : ಗುಣಮಟ್ಟದ ಆರೋಗ್ಯ ಸೇವೆಗೆ - ಮಣಿಪಾಲ ಆರೋಗ್ಯ ಕಾರ್ಡ್ ತುಂಬಾ ಸಹಕಾರಿ ಎಂದು ಕಾರ್ಕಳ ಡಾ ಟಿ ಎಂ ಎ ಪೈ ರೋಟರಿ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ. ಕೀರ್ತಿನಾಥ ಬಲ್ಲಾಳ ಇಲ್ಲಿ ತಿಳಿಸಿದರು.

ಮಾಧ್ಯಮ ಗೋಷ್ಠಿಯಲ್ಲಿ ಮಂಗಳವಾರ ಪತ್ರಕರ್ತರ ಸಂಘದ ಸದಸ್ಯರಿಗೆ ಸಂಘದ ಅಧ್ಯಕ್ಷ ಮೊಹಮದ್ ಶರೀಫ್ ಅವರ ಮೂಲಕ ಆರೋಗ್ಯ ಕಾರ್ಡನ್ನು ವಿತರಿಸಿ ಮಾತನಾಡಿದ ಅವರು ಕಳೆದ 20 ವರ್ಷಗಳಿಂದ ಸಾಮಾಜಿಕ ಕಾಳಜಿಯೊಂದಿಗೆ ಉತ್ಕೃಷ್ಟ ಗುಣಮಟ್ಟದ ಚಿಕಿತ್ಸೆಯನ್ನು ರಿಯಾಯಿತಿ ದರದಲ್ಲಿ ನೀಡುವ ಮೂಲಕ ಈ ಯೋಜನೆಗೆ ಹೆಚ್ಚು ಹೆಚ್ಚು ಸದಸ್ಯರನ್ನು ದಾಖಲಿಸಲಾಗುತ್ತಿದೆ. ಸರ್ವಜನಿಕರು ಇದರ ಪ್ರಯೋಜನವನ್ನು ಪಡೆದುಕೊಳ್ಳಬೇಕು ಎಂದರು.

ಈ ಯೋಜನೆ ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಹಾವೇರಿ ದಾವಣಗೆರೆ, ಚಿತ್ರದುರ್ಗ, ಶಿವಮೊಗ್ಗ, ಚಿಕ್ಕಮಗಳೂರು, ಬಳ್ಳಾರಿ ಸೇರಿದಂತೆ ಕರಾವಳಿ ಕರ್ನಾಟಕದ ಮತ್ತು ಮಧ್ಯ ಕರ್ನಾಟಕದ ಸು. 12ಕ್ಕೂ ಹೆಚ್ಚು ಜಿಲ್ಲೆಗಳಿಗೆ ವಿಸ್ತರಣೆಯಾಗಿದೆ. ಕೇರಳ, ಗೋವಾದಂತಹ ನೆರೆ ರಾಜ್ಯಗಳಿಗೂ ವಿಸ್ತರಣೆಯಾಗಿದೆ. ಯೋಜನೆಯ ನಿಯಮದಂತೆ ಸದಸ್ಯತ್ವ ಶುಲ್ಕವಾಗಿ ಒಂದು ಸಣ್ಣ ಮೊತ್ತವನ್ನು ಪಾವತಿಸುವ ಮೂಲಕ ಯಾರಾದರೂ ಸದಸ್ಯತ್ವವನ್ನು ಪಡೆಯಬಹುದು. ಅಂತಹ ಸದಸ್ಯರು ಆರೋಗ್ಯ ಕಾರ್ಡಿನ ಕೇವಲ ಎರಡು ಅಥವಾ ಮೂರು ಬಳಕೆಗಳಲ್ಲಿ ರಿಯಾಯಿತಿಗಳ ರೂಪದಲ್ಲಿ ಅವರ ಹೂಡಿಕೆಯನ್ನು ಮರಳಿ ಪಡೆಯಬಹುದು ಎಂದರು.

ಮಣಿಪಾಲ ಆರೋಗ್ಯ ಕಾರ್ಡ್ ಹೊಂದಿರುವವರಿಗೆ ಹೊರ ರೋಗಿ ವಿಭಾಗದಲ್ಲಿ ತಜ್ಞ ಅಥವಾ ಸೂಪರ್ ಸ್ಪೆಷಲಿಸ್ಟ್ ವೈದ್ಯರ ಸಮಾಲೋಚನೆಯಲ್ಲಿ ಶೇ.50, ಪ್ರಯೋಗಾಲಯ ಪರೀಕ್ಷೆಯಲ್ಲಿ ಶೇ.30, ಸಿಟಿ, ಎಂಆರ್ಐ, ಅಲ್ಟ್ರಾಸೌಂಡ್ಗಳಲ್ಲಿ ಶೇ. 20, ಹೊರರೋಗಿ ವಿಧಾನಗಳಲ್ಲಿ ಮತ್ತು ಮಧುಮೇಹ ಪಾದ ತಪಾಸಣೆಯಲ್ಲಿ ಶೇ.20, ಔಷಧಾಲಯಗಳಲ್ಲಿ ಶೇ. 12ರ ವರೆಗೆ, ಒಳರೋಗಿಯಾದಲ್ಲಿ ಉಪಯೋಗವಾಗುವ ವಸ್ತುಗಳನ್ನು ಹೊರತುಪಡಿಸಿ ಶೇ. 25  ರಿಯಾಯಿತಿ ದೊರೆಯಲಿವೆ ಎಂದರು. ಹೆಚ್ಚಿನ ವಿವರಗಳಿಗೆ -ಸಹಾಯವಾಣಿ: 9980854700ನ್ನು ಸಂಪರ್ಕಿಸಬಹುದು.

ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದ ಮಾರುಕಟ್ಟೆ ವಿಭಾಗದ ಉಪ ವ್ಯವಸ್ಥಾಪಕ ಮೋಹನ್ ಶೆಟ್ಟಿ, ಕಾರ್ಕಳ ಟಿ.ಎಂ.ಎ. ಪೈ ಆಸ್ಪತ್ರೆಯ ನಟೇಶ್ ಕುಮಾರ್, ಪ್ರತಿನಿಧಿ ಶ್ರೀನಿವಾಸ್ ಭಾಗವತ್, ಚೇತನ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News