ಫಿಲಿಪ್ಪೀನ್ಸ್ ಅಧ್ಯಕ್ಷೀಯ ಸ್ಥಾನಕ್ಕೆ ಸ್ಪರ್ಧಿಸಲು ಬಾಕ್ಸಿಂಗ್‌ನಿಂದ ನಿವೃತ್ತರಾದ ಮ್ಯಾನಿ ಪಾಖಿಯಾವೊ
ಮನಿಲಾ: 2022 ರ ಫಿಲಿಪ್ಪೀನ್ಸ್ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲು ಯೋಜಿಸಿರುವ ಬಾಕ್ಸಿಂಗ್ ಸ್ಟಾರ್ ಮ್ಯಾನಿ ಪಾಖಿಯಾವೊ ಅವರು ತಮ್ಮ ರಾಜಕೀಯ ವೃತ್ತಿಜೀವನದ ಅತಿದೊಡ್ಡ ಹೋರಾಟದ ಮೇಲೆ ಗಮನ ಕೇಂದ್ರೀಕರಿಸಲು ಬಾಕ್ಸಿಂಗ್‌ನಿಂದ ನಿವೃತ್ತರಾಗುವುದಾಗಿ ಬುಧವಾರ ಘೋಷಿಸಿದರು.
ರಾಜಕೀಯ ಹಾಗೂ ಬಾಕ್ಸಿಂಗ್ ನಡುವೆ ತನ್ನ ಸಮಯವನ್ನು ವಿಭಜಿಸುತ್ತಿರುವ ಫಿಲಿಪ್ಪೀನ್ಸ್ ಸೆನೆಟರ್ ಪಾಖಿಯಾವೊ ತನ್ನ ಅಧಿಕೃತ ಫೇಸ್ಬುಕ್ ಪುಟದಲ್ಲಿ ಪೋಸ್ಟ್ ಮಾಡಿದ 14 ನಿಮಿಷಗಳ ವೀಡಿಯೊದಲ್ಲಿ ಈ ಘೋಷಣೆಯನ್ನು ಮಾಡಿದ್ದಾರೆ.
"ನಾನು ಈಗ ಅಂತಿಮ ಬೆಲ್ ಅನ್ನು ಕೇಳಿದೆ. ಬಾಕ್ಸಿಂಗ್ ಮುಗಿದಿದೆ’’ ಎಂದು ಎಂಟು ವಿಭಿನ್ನ ವಿಭಾಗಗಳಲ್ಲಿ ವಿಶ್ವ ಪ್ರಶಸ್ತಿಗಳನ್ನು ಹೊಂದಿರುವ ಏಕೈಕ ಬಾಕ್ಸರ್ ಪಾಖಿಯಾವೊ ಭಾವುಕರಾಗಿ ಹೇಳಿದರು.
"ನನ್ನ ಬಾಕ್ಸಿಂಗ್ ಕೈಗವಸುಗಳನ್ನು ತೆಗೆದುಹಾಕುವಂತಹ ಈ ದಿನ ಬರುತ್ತದೆ ಎಂದು ನಾನು ಎಂದಿಗೂ ಭಾವಿಸಿರಲಿಲ್ಲ" ಎಂದು ಪಾಖಿಯಾವೊ ಹೇಳಿದರು. ಅವರು ವಿಶ್ವದಾದ್ಯಂತದ ತಮ್ಮ ಅಭಿಮಾನಿಗಳಿಗೆ ಧನ್ಯವಾದಗಳನ್ನು ಅರ್ಪಿಸಿದರು.
ಸಾರ್ವಕಾಲಿಕ ಮಹೋನ್ನತ ಬಾಕ್ಸರ್ ಗಳಲ್ಲಿ ಒಬ್ಬರೆಂದು ಪರಿಗಣಿಸಲ್ಪಟ್ಟಿರುವ ಹಾಗೂ 8 ಬಾರಿ ಬಾಕ್ಸಿಂಗ್ ವಿಶ್ವಚಾಂಪಿಯನ್ ಆಗಿರುವ ಪಾಖಿಯಾವೊ ಮುಂದಿನ ವರ್ಷ ನಡೆಯಲಿರುವ ಅಧ್ಯಕ್ಷ ಹುದ್ದೆಯ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ರವಿವಾರ ಘೋಷಿಸಿದ್ದರು.