ಸಿದ್ದರಾಮಯ್ಯ ಓರ್ವ ಭಯೋತ್ಪಾದಕ: ನಳಿನ್ ಕುಮಾರ್ ಕಟೀಲು

Update: 2021-09-29 06:49 GMT

ಮಂಗಳೂರು, ಸೆ.29: ನನಗೆ ಅನಿಸುತ್ತದೆ ಸಿದ್ದರಾಮಯ್ಯರೇ ಓರ್ವ ಭಯೋತ್ಪಾದಕ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ, ಸಂಸದ ನಳಿನ್ ಕುಮಾರ್ ಕಟೀಲು ಹೇಳಿದ್ದಾರೆ.

ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಆರೆಸ್ಸೆಸ್ಸಿಗರು ತಾಲಿಬಾನಿಗಳಿದ್ದಂತೆ ಎಂಬ ಸಿದ್ದರಾಮಯ್ಯ ಅವರ ಹೇಳಿಕೆಗೆ ಸಂಬಂಧಿಸಿ ಈ ರೀತಿ ಪ್ರತಿಕ್ರಿಯಿಸಿದರು.

ಸಿದ್ದರಾಮಯ್ಯ ಕಾಂಗ್ರೆಸ್ ನಲ್ಲಿ ಅತಂತ್ರ ಸ್ಥಿತಿಯಲ್ಲಿದ್ದಾರೆ. ಅವರು ಅತಂತ್ರ ಸ್ಥಿತಿಯಲ್ಲಿದ್ದಾಗ ಇಂತಹ ಹೇಳಿಕೆಗಳನ್ನು ನೀಡುತ್ತಾರೆ ಎಂದು ಹೇಳಿದರು.

ತಾಲಿಬಾನ್ ಸಂಸ್ಕೃತಿ ಸಿದ್ಧರಾಮಯ್ಯ ಅವರದ್ದೇ. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗಲೇ ರಾಜ್ಯದಲ್ಲಿ ಅತೀ ಹೆಚ್ಚು ಹತ್ಯೆಗಳು ನಡೆದಿವೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರಶಾಂತ್ ಪೂಜಾರಿ, ಶರತ್ ಮಡಿವಾಳ, ದೀಪಕ್ ರಾವ್, ಮಡಿಕೇರಿಯ ಕುಟ್ಟಪ್ಪ ಎಂಬವರ ಹತ್ಯೆಯಾಯಿತು. ಅವರ ಅವಧಿಯಲ್ಲಿ ರಾಜ್ಯದಲ್ಲಿ 24 ಹಿಂದೂ ಯುವಕರ ಹತ್ಯೆಗಳಾದವು. ಎಟಿಎಂ ಒಳಗೆ ಹೋದ ಮಹಿಳೆಯ ಮೇಲೆ ಹಲ್ಲೆ ನಡೆಯಿತು. ಸುಳ್ಯದಲ್ಲಿ ಕಾಲೇಜಿಗೆ ಹೋದ ವಿದ್ಯಾರ್ಥಿನಿಯ ಹತ್ಯೆಯಾಯಿತು. ಇದೆಲ್ಲವೂ ಸಿದ್ದರಾಮಯ್ಯ ಆಡಳಿತದ ಅವಧಿಯಲ್ಲಿ ನಡೆದಿರುವಂಥದ್ದು. ಅವರದ್ದು ತಾಲಿಬಾನ್ ಸಂಸ್ಕೃತಿ. ಅದಕ್ಕಾಗಿಯೇ ಸಿದ್ದರಾಮಯ್ಯರನ್ನು ಭಯೋತ್ಪಾದಕ ಅಂತಾ ಹೇಳಿದ್ದು ಎಂದು ನಳಿನ್ ನುಡಿದರು.

 ಸಿದ್ದರಾಮಯ್ಯ ಆಡಳಿತದಲ್ಲೇ ಹೆಚ್ಚು, ಕೊಲೆ, ಸುಲಿಗೆ, ನಿತ್ಯ ಗೋ ಹತ್ಯೆಗಳು ನಡೆಯುತ್ತಿತ್ತು. ಹಾಗಾಗಿ ಅವರಿಗೆ ಆರೆಸ್ಸೆಸ್ ಬಗ್ಗೆ ಮಾತನಾಡಲು ನೈತಿಕತೆ ಎಲ್ಲಿದೆ ಎಂದು ನಳಿನ್ ಕುಮಾರ್ ಕಟೀಲು ಪ್ರಶ್ನಿಸಿದ್ದಾರೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News