‘ಕೊನೆಯ ಉಸಿರು ಇರುವವರೆಗೂ ಸತ್ಯಕ್ಕಾಗಿ ಹೋರಾಡುತ್ತಲೇ ಇರುತ್ತೇನೆ’: ನವಜೋತ್ ಸಿಂಗ್ ಸಿಧು ವೀಡಿಯೊ ಸಂದೇಶ

Update: 2021-09-29 06:53 GMT

ಹೊಸದಿಲ್ಲಿ: ಪಂಜಾಬ್ ಕಾಂಗ್ರೆಸ್ ಮುಖ್ಯಸ್ಥ ಸ್ಥಾನಕ್ಕೆ ರಾಜೀನಾಮೆ ನೀಡಿ ಎಲ್ಲರನ್ನು ಅಚ್ಚರಿಗೊಳಿಸಿದ ಒಂದು ದಿನದ ನಂತರ ನವಜೋತ್ ಸಿಂಗ್ ಸಿಧು ಬುಧವಾರ  ಬೆಳಿಗ್ಗೆ ವೀಡಿಯೊ ಸಂದೇಶವನ್ನು ಟ್ವೀಟ್ ಮಾಡಿದ್ದಾರೆ.

 "ನನ್ನ ಕೊನೆಯ ಉಸಿರು ಇರುವವರೆಗೂ ನಾನು ಸತ್ಯಕ್ಕಾಗಿ ಹೋರಾಡುತ್ತೇನೆ" ಎಂದು ಸಿಧು ಪಂಜಾಬಿಯಲ್ಲಿ ಭಾವನಾತ್ಮಕ ಹೇಳಿಕೆಯಲ್ಲಿ ಹೇಳಿದರು.

"ನನ್ನ ಹೋರಾಟವು ವಿಚಾರ ಆಧಾರಿತವಾಗಿದೆ ಹಾಗೂ  ನಾನು ಅದನ್ನು ದೀರ್ಘಕಾಲ ಬೆಂಬಲಿಸುತ್ತಿದ್ದೇನೆ. ಪಂಜಾಬ್ ಪರ ಕಾರ್ಯಸೂಚಿಯಲ್ಲಿ ಯಾವುದೇ ರಾಜಿ ಮಾಡಿಕೊಳ್ಳುವಂತಿಲ್ಲ. ನಾನು ಎಂದಿಗೂ ಹೈಕಮಾಂಡ್ ಅನ್ನು ತಪ್ಪುದಾರಿಗೆಳೆಯಲು ಸಾಧ್ಯವಿಲ್ಲ ಅಥವಾ ಅದನ್ನು ದಾರಿ ತಪ್ಪಿಸಲು ಬಿಡುವುದಿಲ್ಲ" ಎಂದು ಸಿಧು ಹೇಳಿದರು.

ಮಂತ್ರಿಗಳು ಹಾಗೂ  ಇತರ ಅಧಿಕಾರಿಗಳ ನೇಮಕಾತಿಯ ಬಗ್ಗೆ ಚನ್ನಿಯ ನಿರ್ಧಾರಗಳು ಸಿಧು ಅವರನ್ನು ಕಸಿವಿಸಿಗೊಳಿಸಿದವು ಎನ್ನಲಾಗಿದೆ.

"ನಾನು ತತ್ವಗಳ ಮೇಲೆ ನಿಲ್ಲಲು ಯಾವುದೇ ತ್ಯಾಗವನ್ನು ಮಾಡುತ್ತೇನೆ. ಅದಕ್ಕಾಗಿ ನಾನು ಹೆಚ್ಚು ಯೋಚಿಸುವ ಅಗತ್ಯವಿಲ್ಲ. ಕಳಂಕಿತ ಮಂತ್ರಿಗಳು ಹಾಗೂ  ಅಧಿಕಾರಿಗಳಿಗೆ ಅವಕಾಶ ಕಲ್ಪಿಸಿದ ವ್ಯವಸ್ಥೆಯನ್ನು ನಾನು ಮುರಿದಿದ್ದೇನೆ. ಈಗ ಕಳಂಕಿತ ಮಂತ್ರಿಗಳು ಹಾಗೂ  ಅಧಿಕಾರಿಗಳನ್ನು ಮತ್ತೆ ನೇಮಿಸಲು ಸಾಧ್ಯವಿಲ್ಲ. ನಾನು ಅಂತಹ ನೇಮಕಾತಿಗಳನ್ನು ವಿರೋಧಿಸುತ್ತೇನೆ.  ಕಳಂಕಿತ ಮಂತ್ರಿಗಳನ್ನು ಮರಳಿ ಕರೆತರುವುದನ್ನು ತಾನು ಒಪ್ಪುವುದಿಲ್ಲ'' ಎಂದು ಅವರು  ಹೇಳಿದರು.

ರಾಣಾ ಗುರ್ಜಿತ್ ಸಿಂಗ್ ಅವರನ್ನು ಮತ್ತೆ ಸಚಿವ ಸಂಪುಟಕ್ಕೆ ಸೇರಿಸಿಕೊಂಡಿದ್ದಕ್ಕೆ ಸಿಧು ಅಸಮಾಧಾನಗೊಂಡಿದ್ದಾರೆ ಎಂದು ವರದಿಯಾಗಿದೆ.  ರಾಣಾ ಗುರ್ಜಿತ್  ಸಿಂಗ್ ಅವರ ಮೇಲೆ ಮರಳು ಗಣಿಗಾರಿಕೆ ಹಗರಣದ ಆರೋಪವಿದೆ ಹಾಗೂ  2018 ರಲ್ಲಿ ಅಮರೀಂದರ್ ಸಿಂಗ್ ಸಂಪುಟವನ್ನು ತೊರೆದಿದ್ದರು. ನಂತರ ಅವರನ್ನು ವಿಚಾರಣಾ ಸಮಿತಿಯು ದೋಷ ಮುಕ್ತಗೊಳಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News