ರಾಷ್ಟ್ರಪತಿ ರಾಮನಾಥ ಕೋವಿಂದ್ ಅ.6ರಿಂದ 9ರವರೆಗೆ ಕರ್ನಾಟಕ ಪ್ರವಾಸ
ಮಂಗಳೂರು, ಸೆ.29: ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಅಕ್ಟೋಬರ್ 6ರಿಂದ ಅ.9ರವರೆಗೆ ಕರ್ನಾಟಕ ಪ್ರವಾಸ ಕೈಗೊಳ್ಳಲಿದ್ದಾರೆ. ಈ ಸಂದರ್ಭ ಅವರು ಬೆಂಗಳೂರು, ಮೈಸೂರು, ಚಾಮರಾಜನಗರ, ಶೃಂಗೇರಿ ಹಾಗೂ ಮಂಗಳೂರಿಗೆ ಭೇಟಿ ನೀಡಲಿದ್ದಾರೆ.
ಅಕ್ಟೋಬರ್ 6ರಂದು ರಾಷ್ಟ್ರಪತಿ ಭವನದಿಂದ ಬೆಂಗಳೂರು ಆಗಮಿಸಿ ಸಂಜೆ 5:30ಕ್ಕೆ ಬೆಂಗಳೂರು ರಾಜಭವನದಲ್ಲಿ ಹೈಕೋರ್ಟ್ ನ್ಯಾಯಾಧೀಶರ ಜತೆ ಚಹಾಕೂಟದಲ್ಲಿ ಭಾಗವಹಿಸಲಿದ್ದು, ಅ.7ರಂದು ಬಿಳಿಗಿರಿರಂಗನಾಥಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡುವರು. ಅಂದು ಸಂಜೆ 3:30ಕ್ಕೆ ಚಾಮರಾಜನಗರದಲ್ಲಿ 450 ಬೆಡ್‌ಗಳ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸಾಯನ್ಸ್ (ಸಿಐಎಂಎಸ್) ಸರಕಾರಿ ಬೋಧನಾ ಆಸ್ಪತ್ರೆಯ ಉದ್ಘಾಟನೆ ನೆರವೇರಿಸಲಿದ್ದಾರೆ. ಅಲ್ಲಿಂದ ಮಂಗಳೂರಿಗೆ ಆಗಮಿಸಿ ವಾಸ್ತವ್ಯವಿದ್ದು, ಅ.8ರಂದು ಶೃಂಗೇರಿ ಕ್ಷೇತ್ರಕ್ಕೆ ಭೇಟಿ ನೀಡಿ ಹಿಂದಿರುಗಿ ಮಂಗಳೂರಿನಲ್ಲಿ ಆ ದಿನ ವಾಸ್ತವ್ಯವಿದ್ದು, ಅ.9ರಂದು ರಾಷ್ಟ್ರಪತಿ ಭವನಕ್ಕೆ ತೆರಳಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.
ಅ.6ರಂದು ರಾಷ್ಟ್ರಪತಿ ರಾಮನಾಥ ಕೋವಿಂದ್ ಮಧ್ಯಾಹ್ನ 12 ಗಂಟೆಯ ವೇಳೆಗೆ ಅವರು ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಬಂದಿಳಿಯಲಿದ್ದಾರೆ. ಅಂದು ರಾಜಭವನದಲ್ಲಿ ಹೈಕೋರ್ಟ್ ನ್ಯಾಯಾಧೀಶರ ಚಹಾ ಕೂಟದ ಬಳಿಕ ರಾತ್ರಿ ರಾಜಭವನಲ್ಲಿಯೇ ವಾಸ್ತವ್ಯ ಹೂಡಲಿದ್ದಾರೆ. ಅ.7ರಂದು ಬೆಳಗ್ಗೆ 10:40ಕ್ಕೆ ಮೈಸೂರು ಆಗಮಿಸಲಿದ್ದಾರೆ. ಅಲ್ಲಿಂದ 11 ಗಂಟೆಗೆ ಚಾಮರಾಜನಗರದ ಯಳಂದೂರು ತಾಲೂಕಿನ ಬಿಆರ್ ಹಿಲ್ಸ್ ಬಳಿಯ ಬಿಳಿಗಿರಿ ರಂಗನಾಥಸ್ವಾಮಿ ದೇವಾಲಯ ಸಮೀಪದ ಹೆಲಿಪ್ಯಾಡ್‌ನಲ್ಲಿ ಬಂದಿಳಿಯಲಿದ್ದಾರೆ. ಚಾಮರಾಜನಗರ ಆಸ್ಪತ್ರೆ ಉದ್ಘಾಟನೆ ಬಳಿಕ ಅಂದು ಸಂಜೆ ಮೈಸೂರು ವಿಮಾನ ನಿಲ್ದಾಣದಿಂದ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿ ಮಂಗಳೂರಿನಲ್ಲಿ ವಾಸ್ತವ್ಯ ಹೂಡಲಿದ್ದಾರೆ. ಅ.8ರಂದು ಬೆಳಗ್ಗೆ 10:45ಕ್ಕೆ ಮಂಗಳೂರು ವಿಮಾನ ನಿಲ್ದಾಣದಿಂದ ಶೃಂಗೇರಿಗೆ ತೆರಳಲಿದ್ದಾರೆ. ಅಂದು ಸಂಜೆ ಶೃಂಗೇರಿಯಿಂದ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿ ಮತ್ತೆ ಮಂಗಳೂರಿನಲ್ಲಿಯೇ ಆ ದಿನ ವಾಸ್ತವ್ಯ ಹೂಡಲಿದ್ದಾರೆ. ಅ.9ರಂದು ಪೂರ್ವಾಹ್ನ 11:15ಕ್ಕೆ ಮಂಗಳೂರು ವಿಮಾನ ನಿಲ್ದಾಣಕ್ಕೆ ತೆರಳಿ ಅಲ್ಲಿಂದ ರಾಷ್ಟ್ರಪತಿ ಭವನಕ್ಕೆ ಪ್ರಯಾಣ ಬೆಳೆಸಲಿದ್ದಾರೆ ಎಂದು ಅವರ ಪ್ರವಾಸ ಕಾರ್ಯಕ್ರಮ ಪ್ರಕಟನೆಯಲ್ಲಿ ತಿಳಿಸಲಾಗಿದೆ.