×
Ad

ಏತ ನೀರಾವರಿ ಕಾಮಗಾರಿ ಅವ್ಯವಸ್ಥೆ: ಇಂಜಿನಿಯರ್ ಭೇಟಿ

Update: 2021-09-29 18:50 IST

ಕುಂದಾಪುರ, ಸೆ.29: ಗುಲ್ವಾಡಿಯ ಸೌಕೂರು ಏತ ನೀರಾವರಿ ಯೋಜನೆಯ ಕಾಮಗಾರಿಗಳು ಅವ್ಯವಸ್ಥೆಯಿಂದ ಕೂಡಿದೆ ಎಂದು ಆರೋಪಿಸಿ ಸಿಪಿಐಎಂ ಬೈಂದೂರು ವಲಯ ಸಮಿತಿ ಪ್ರತಿಭಟನೆ ನಡೆಸಿ ಮನವಿ ನೀಡಿದ ಬಳಿಕ ಮನವಿಗೆ ಸ್ಪಂದಿಸಿದ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಪ್ರಸನ್ನ ಅವರು ಬುಧವಾರ ಕಾಮಗಾರಿ ನಡೆಯುವ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ಈ ವೇಳೆ ಸ್ಥಳದಲ್ಲಿ ಸೇರಿದ ಸ್ಥಳೀಯ ಗ್ರಾಮಸ್ಥರ ಸಮಸ್ಯೆ, ದೂರುಗಳನ್ನು ಆಲಿಸಿ ಮಾತನಾಡಿದ ಪ್ರಸನ್ನ, ಹಾನಿಗೊಂಡ ಕುಡಿಯುವ ನೀರಿನ ಬಾವಿ ದುರಸ್ತಿಗೆ ಕ್ರಮಕೈಗೊಂಡು ಕಾಮಗಾರಿ ನಡೆಸಲಾಗುತ್ತದೆ. ಅ.15ರೊಳಗೆ ಕಾಮಗಾರಿಯನ್ನು ಪೂರ್ಣ ಗೊಳಿಸಲಾಗುವುದು. ಸ್ಥಳೀಯರ ಬೇಡಿಕೆಯಂತೆ ಮೂವತ್ತು ಅಡಿ ಆಳಕ್ಕೆ ಇಳಿಸಲಾಗುವುದು ಎಂದರು.

ಯೋಜನೆಯ ವಿದ್ಯುತ್ ಪ್ರಸರಣ ಮಾರ್ಗದಲ್ಲಿ ಸ್ಥಳೀಯ ನಿವಾಸಿಗಳ ಮನೆಯ ಸಮೀಪ ಅಳವಡಿಸಿರುವ ವಿದ್ಯುತ್ ಕಂಬಗಳನ್ನು ತೆರವು ಗೊಳಿಸಲಾಗುವುದು. ಗುಲ್ವಾಡಿ ಹಾಗೂ ಮಾವಿನಕಟ್ಟೆ ಶಾಲೆಗೆ ಮೂಲ ಸೌಕರ್ಯ ಒದಗಿಸುವ ಭರವಸೆ ನೀಡಿದ ಅವರು, ಶೆಟ್ರಕಟ್ಟೆಯ ಖಾಸಗಿ ಜಾಗದಲ್ಲಿ ಸರಕಾರಿ ಕಾಮಗಾರಿ ಹಿಂಪಡೆಯಲಾಗಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಸಿಪಿಎಂ ಪಕ್ಷದ ಸ್ಥಳೀಯ ಮುಖಂಡರಾದ ಜಿ.ಡಿ ಪಂಜು ಪೂಜಾರಿ, ಗ್ರಾಪಂ ಅಧ್ಯಕ್ಷ ಸುದೀಶ್ ಕುಮಾರ್ ಶೆಟ್ಟಿ, ಸದಸ್ಯರಾದ ಯಾಸ್ಮೀನ್ ಜಮಾಲ್, ಹಂಝ ಗುಲ್ವಾಡಿ, ಅಣ್ಣಪ್ಪ ಅಬ್ಬಿಗುಡ್ಡಿ, ಕಟ್ಟಡ ಕಾರ್ಮಿಕರ ಸಂಘದ ಗುಲ್ವಾಡಿ ಅಧ್ಯಕ್ಷ ಅಬ್ಬಾಸ್, ಸಿಪಿಐ(ಎಂ) ಬೈಂದೂರು ವಲಯ ಕಾರ್ಯದರ್ಶಿ ಸುರೇಶ್ ಕಲ್ಲಾಗರ, ಎಚ್.ನರಸಿಂಹ, ವೆಂಕಟೇಶ್ ಕೋಣಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News