ಕುಂದಾಪುರ; ದೋಣಿಯಲ್ಲಿ ಮನೆಗೆ ತೆರಳಿ ಲಸಿಕೆ ನೀಡಿದ ನರ್ಸ್, ಆಶಾ ಕಾರ್ಯಕರ್ತೆಯರು: ಸಾರ್ವಜನಿಕರಿಂದ ಭಾರೀ ಪ್ರಶಂಸೆ
Update: 2021-09-29 19:10 IST
ಕುಂದಾಪುರ, ಸೆ.29: ಬುಧವಾರ ಜಿಲ್ಲೆಯಲ್ಲಿ ಕೋವಿಡ್-19 ಲಸಿಕಾ ಮಹಾಮೇಳದ ಸಂದರ್ಭದಲ್ಲಿ ಬೈಂದೂರು ತಾಲೂಕು ಮರವಂತೆ ಪ್ರಾಥಮಿಕ ಆರೋಗ್ಯ ಕೇಂದ್ರದ ಇಬ್ಬರು ನರ್ಸ್‌ಗಳು ಹಾಗೂ ಇಬ್ಬರು ಆಶಾ ಕಾರ್ಯಕರ್ತೆಯರು ತಮ್ಮ ಉಪಕೇಂದ್ರ ವ್ಯಾಪ್ತಿಯಲ್ಲಿ ಬರುವ ಹಿರಿಯರಿಗೆ ದೋಣಿ ಮೂಲಕ ಹೊಳೆ ದಾಟಿ ಸಾಗಿ ಲಸಿಕೆ ನೀಡಿದ್ದಾರೆ.
ನರ್ಸ್‌ಗಳಾದ ಮಿತ್ರಾ ಹಾಗೂ ರಾಜೇಶ್ವರಿ ಮತ್ತು ಆಶಾ ಕಾರ್ಯಕರ್ತೆಯರಾದ ದೇವಕಿ ಮತ್ತು ಸಾಕು ಅವರು ಇಂದು ಉಪಕೇಂದ್ರ ವ್ಯಾಪ್ತಿಯ ಕುದ್ರು ಪ್ರದೇಶಕ್ಕೆ ರಮೇಶ್ ಕಾರಂತರ ದೋಣಿ ಮೂಲಕ ಸಾಗಿ, ಮನೆಯಲ್ಲಿದ್ದು ಲಸಿಕಾ ಕೇಂದ್ರಗಳಿಗೆ ಬರಲಾಗದ ಹಿರಿಯರಿಗೆ ಕೋವಿಡ್-19 ಲಸಿಕೆಯನ್ನು ನೀಡಿದ್ದಾರೆ.
ಮರವಂತೆ ಪ್ರಾಥಮಿಕ ಆರೋಗ್ಯ ಕೇಂದ್ರದ ನರ್ಸ್ ಹಾಗೂ ಆಶಾ ಕಾರ್ಯಕರ್ತೆಯರ ಈ ನಡೆ ಭಾರೀ ಜನಮೆಚ್ಚುಗೆಗೆ ಪಾತ್ರವಾಗಿದೆ. ಹಾಗೂ ಉಳಿದವರಿಗೆ ಸ್ಪೂರ್ತಿಯನ್ನು ತುಂಬಿದೆ ಎಂದು ಸರಕಾರಿ ವೈದ್ಯರೊಬ್ಬರು ತಿಳಿಸಿದರು.