×
Ad

ಚಾಂತಾರು: ಬಾವಿಗೆ ಬಿದ್ದ ಚಿರತೆ ಮರಿಯ ರಕ್ಷಣೆ

Update: 2021-09-29 19:19 IST

ಬ್ರಹ್ಮಾವರ, ಸೆ.29: ಬುಧವಾರ ಬೆಳಗಿನ ಜಾವ ಮನೆಯೊಂದರ ಬಾವಿಗೆ ಅಕಸ್ಮಿಕವಾಗಿ ಬಿದ್ದ ಚಿರತೆಯ ಮರಿಯನ್ನು ಮನೆಯವರು, ಸಾರ್ವಜನಿಕರು ಹಾಗೂ ಅರಣ್ಯ ಇಲಾಖೆಯ ಸಿಬ್ಬಂದಿಗಳು ಸೇರಿ ರಕ್ಷಿಸಿದ ಘಟನೆ ಚಾಂತಾರು ಅಗ್ರಹಾರದ ದೇವುಬೈಲಿನಲ್ಲಿ ನಡೆದಿದೆ.

ಪ್ರಾಯಶ: ತಾಯಿಯೊಂದಿಗೆ ಆಹಾರ ಅರಸುತ್ತಾ ಬೆಳಗಿನ ಜಾವ ಬಂದಿರಬಹುದಾದ ಸುಮಾರು ಎಂಟು ತಿಂಗಳ ಪ್ರಾಯ ಹೆಣ್ಣು ಚಿರತೆ ಮರಿ ಅಕಸ್ಮಿಕವಾಗಿ ಅಗ್ರಹಾರ ಕೃಷ್ಣಮೂರ್ತಿ ಕೆದ್ಲಾಯರ ಮನೆಯ ಬಾವಿಗೆ ಬಿದ್ದಿತ್ತು.

ಬಾವಿಗೆ ಬಿದ್ದಿದ್ದ ಚಿರತೆಯನ್ನು ಬೆಳಗ್ಗೆ ಮನೆಯವರು ಗಮನಿಸಿ ನಾಯಿ ಎಂದೇ ತಿಳಿದು ರಕ್ಷಿಸಲು ಮುಂದಾಗಿದ್ದರು. ರಾಟೆ ಹಗ್ಗದ ಮೂಲಕ ಕೊಡಪಾನ ಇಳಿಸಿ ಮೇಲಕ್ಕೆ ಎತ್ತಿದ್ದಾರೆ. ನೀರಿನಿಂದ ಮೇಲೆ ಬಂದ ಮೇಲೆಯೇ ಅದು ಚಿರತೆ ಮರಿ ಎಂದು ಮನೆಯವರಿಗೆ ಗೊತ್ತಾಯಿತು.

ಮೇಲೆ ಬಂದ ಚಿರತೆ ಮರಿ ಅಲ್ಲಿಂದ ತಪ್ಪಿಸಿಕೊಂಡು ಮನೆಯ ಸಿಟ್‌ ಔಟ್ ಮೂಲಕ ತೆರಳಿ ಸ್ಲ್ಯಾಬ್‌ಗೆ ತೆರಳುವ ಮೆಟ್ಟಿಲ ಅಡಿಯ ಶೆಡ್‌ನಲ್ಲಿ ಅಡಗಿ ಕುಳಿತುಕೊಂಡಿತು. ಮರಿ ಚಿರತೆ ಎನ್ನುವುದು ತಿಳಿದು ಮನೆಯವರು, ಸ್ಥಳೀಯರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದರು. ಅರಣ್ಯ ಇಲಾಖೆ ಯವರು ಬಂದು ಬಲೆ ಹಾಕಿ ಚಿರತೆ ಮರಿಯನ್ನು ಹಿಡಿದು ಬೋನಿಗೆ ಸೇರಿಸಿ ಬಳಿಕ ಹುಲಿಕಲ್ ಘಾಟಿಗೆ ತೆಗೆದುಕೊಂಡು ಹೋಗಿ ಬಿಡಲಾಯಿತು.

ಈ ಪರಿಸರದಲ್ಲಿ ಚಿರತೆ ಇರುವಿಕೆಯ ದೂರು ಬಂದ ಹಿನ್ನೆಲೆಯಲ್ಲಿ ಕೆಲ ಸಮಯದ ಹಿಂದೆ ಬೋನನ್ನು ಇರಿಸಲಾಗಿತ್ತು ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ. ಕಾರ್ಯಾಚರಣೆಯಲ್ಲಿ ಉಪವಲಯ ಅರಣ್ಯಾಧಿಕಾರಿ ಹರೀಶ್ ಕೆ., ಇಲಾಖೆಯ ಗುರುರಾಜ್ ಕೆ., ದೇವರಾಜ್ ಪಾಣ, ರಮೇಶ್, ಸುರೇಶ್, ಕೇಶವ, ಮಂಜುನಾಥ್, ಜೋಯ್, ಪೊಲೀಸ್ ಸಿಬಂದಿಗಳು ಪಾಲ್ಗೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News