×
Ad

ವಿದ್ಯಾರ್ಥಿಗಳ ಮೇಲೆ ಹಲ್ಲೆ ಪ್ರಕರಣ; ಆರೋಪಿಗಳ ವಿರುದ್ಧ ಕಠಿಣ ಕ್ರಮಕ್ಕೆ ಎಸ್‌ಐಒ, ಜಿಐಒ ಆಗ್ರಹ

Update: 2021-09-29 22:49 IST

ಮಂಗಳೂರು, ಸೆ.29: ಸುರತ್ಕಲ್‌ನಲ್ಲಿ ವಿದ್ಯಾರ್ಥಿಗಳ ಮೇಲೆ ಹಲ್ಲೆ ಘಟನೆಯು ಅತ್ಯಂತ ಖಂಡನೀಯ ಬೆಳವಣಿಗೆಯಾಗಿದ್ದು, ಈ ಕೃತ್ಯ ನಡೆಸಿ ಸಮಾಜದ ಸ್ವಾಸ್ಥ ಕೆಡಿಸಲು ಯತ್ನಿಸಿದ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಎಸ್‌ಐಒ ಹಾಗೂ ಜಿಐಒ ದಕ್ಷಿಣ ಕನ್ನಡ ನಿಯೋಗವು ಮಂಗಳೂರು ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿತು.

ದೇಶದಲ್ಲಿಯೇ ಉನ್ನತ ಮಟ್ಟದ ಶಿಕ್ಷಣ ಸಂಸ್ಥೆಗಳು ಜಿಲ್ಲೆಯಲ್ಲಿದ್ದು, ಹಲವು ರಾಜ್ಯದ ವಿದ್ಯಾರ್ಥಿಗಳು ಮಂಗಳೂರಿನಲ್ಲಿ ಉನ್ನತ ವ್ಯಾಸಂಗ ಮಾಡುತ್ತಿದ್ದಾರೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳಿಗೆ ಸುರಕ್ಷಿತ ವಾತಾವರಣನ್ನು ಸೃಷ್ಟಿಸುವ ಕರ್ತವ್ಯವು ಪೊಲೀಸ್ ಇಲಾಖೆಯ ಮೇಲಿದೆ. ಹೊರ ರಾಜ್ಯಗಳಿಂದ ಬರುವ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ವಿದ್ಯಾರ್ಥಿ ಸ್ನೇಹಿ ಸಹಾಯವಾಣಿಯನ್ನು ಪ್ರಾರಂಭಿಸಲು ಆಗ್ರಹಿಸಲಾಯಿತು.

ಜಿಐಒ ಜಿಲ್ಲಾ ಸಂಚಾಲಕಿ ಡಾ.ಫಿದಾ ಇಸ್ಮಾಯಿಲ್ ಮಾತನಾಡಿ, ಹೆಣ್ಮಕ್ಕಳ ಹೆತ್ತವರು ಸುರಕ್ಷತೆಯ ಕಾರಣದಿಂದಾಗಿ ಉನ್ನತ ಶಿಕ್ಷಣ ಕೊಡಿಸಲು ಮೀನಮೇಷ ಎಣಿಸುತ್ತಿರುವ ಇಂದಿನ ದಿನಗಳಲ್ಲಿ ಇಂತಹ ಘಟನೆಗಳಿಂದ ಹೆಣ್ಮಕ್ಕಳು ಶಿಕ್ಷಣದಿಂದ ವಂಚಿತರಾಗುವ ಸಾಧ್ಯತೆ ಇದೆ ಎಂದು ಕಳವಳ ವ್ಯಕ್ತಪಡಿಸಿದರು. ಮುಂದಿನ ದಿನಗಳಲ್ಲಿ ಇಂತಹ ಯಾವುದೇ ರೀತಿಯ ಸಮಸ್ಯೆಗಳು ಎದುರಾಗದಂತೆ ಪೊಲೀಸ್ ಇಲಾಖೆಯು ಎಚ್ಚರ ವಹಿಸಬೇಕೆಂದು ನಿಯೋಗವು ಆಗ್ರಹಿಸಿತು.

ನಿಯೋಗದಲ್ಲಿ ಎಸ್‌ಐಒ ಜಿಲ್ಲಾ ಕಾರ್ಯದರ್ಶಿ ನಿಹಾಲ್ ಮುಹಮ್ಮದ್, ಜಿಲ್ಲಾ ಕ್ಯಾಂಪಸ್ ಕಾರ್ಯದರ್ಶಿ ಝಮೀರ್ ಪಕ್ಕಲಡ್ಕ, ಜಿಐಒ ಮಂಗಳೂರು ಸ್ಥಾನೀಯ ಅಧ್ಯಕ್ಷೆ ಹನೀಫ ತ್ವಬೀಬ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News