ಇಥಿಯೋಪಿಯಾದ ಬಿಕ್ಕಟ್ಟು ನಮ್ಮ ಆತ್ಮಸಾಕ್ಷಿಯ ಮೇಲಿನ ಕಳಂಕ; ವಿಶ್ವಸಂಸ್ಥೆ‌ ಹೇಳಿಕೆ

Update: 2021-09-29 18:08 GMT

ವಿಶ್ವಸಂಸ್ಥೆ, ಸೆ.29: ಯುದ್ಧದಿಂದ ಜರ್ಜರಿತವಾಗಿರುವ ಟಿಗ್ರೇ ಪ್ರಾಂತ್ಯವನ್ನು ಉಪವಾಸದತ್ತ ದೂಡುವ ಇಥಿಯೋಪಿಯಾದ ಬಿಕ್ಕಟ್ಟು ನಮ್ಮ ಆತ್ಮಸಾಕ್ಷಿಯ ಮೇಲಿನ ಕಳಂಕವಾಗಿದೆ ಎಂದು ವಿಶ್ವಸಂಸ್ಥೆಯ ಮಾನವೀಯ ವಿಭಾಗದ ಮುಖ್ಯಸ್ಥ ಮಾರ್ಟಿನ್ ಗ್ರಿಫಿತ್ ಹೇಳಿದ್ದಾರೆ. ದೇಶ ಮತ್ತಷ್ಟು ಪ್ರಪಾತಕ್ಕೆ ಕುಸಿಯುವುದನ್ನು ತಪ್ಪಿಸುವ ಹೊಣೆ ಇಥಿಯೋಪಿಯಾದ ನೂತನ ಸರಕ್ಕಾರದ್ದಾಗಿದೆ. ಈಗ ಆ ದೇಶದಲ್ಲಿ ಸಹಜ ಆಹಾರದ ಬದಲು ಜನತೆ ಗೆಡ್ಡೆ, ಬೇರು, ಹೂ, ಗಿಡಗಳನ್ನು ತಿನ್ನುವ ಪರಿಸ್ಥಿತಿಯಿದೆ ಎಂದು ‘ದಿ ಅಸೋಸಿಯೇಟೆಡ್ ಪ್ರೆಸ್’ಗೆ ನೀಡಿದ ಸಂದರ್ಶನದಲ್ಲಿ ಗ್ರಿಫಿತ್ ಹೇಳಿದ್ದಾರೆ.

ಇಥಿಯೋಪಿಯಾದಲ್ಲಿ ಸುಮಾರು 1 ಮಿಲಿಯನ್ ಜನತೆಯ ಸಾವಿಗೆ ಕಾರಣವಾದ 1980ರ ಭೀಕರ ಬರಗಾಲದ ನೆನಪು ಈಗಲೂ ಮನದಲ್ಲಿದೆ. ಈ ಸ್ಥಿತಿ ಮತ್ತೆ ಪುನರಾವರ್ತನೆಯಾಗಬಾರದು ಎಂಬುದು ನಮ್ಮೆಲ್ಲರ ಆಶಯವಾಗಿದೆ. ಈ ಬರಗಾಲದ ನೆನಪಿನಲ್ಲಿ ಈಗಲೂ ಅಲ್ಲಿನ ಜನತೆ ನಿದ್ದೆಯಿಲ್ಲದ ರಾತ್ರಿಗಳನ್ನು ಕಳೆಯುತ್ತಿದ್ದಾರೆ ಎಂದ ಗ್ರಿಫಿತ್, ಅಪೌಷ್ಟಿಕತೆಯ ಸಮಸ್ಯೆ 22%ಕ್ಕೂ ಅಧಿಕ ಪ್ರಮಾಣದಲ್ಲಿರುವ ಟಿಗ್ರೆ ವಲಯಕ್ಕೆ ಆಹಾರ, ಔಷಧ ಪೂರೈಕೆ ಮತ್ತು ತೈಲ ಪೂರೈಕೆಗೆ ಸರಕಾರದ ದಿಗ್ಭಂಧನವಿದೆ ಎಂಬ ವಿಶ್ವಸಂಸ್ಥೆಯ ಹೇಳಿಕೆಯನ್ನು ಟೀಕಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ಟಿಗ್ರೆ ವಲಯಕ್ಕೆ ಅಗತ್ಯವಿರುವ ಮಾನವೀಯ ನೆರವಿನಲ್ಲಿ ಕೇವಲ 10% ಮಾತ್ರ ಅಲ್ಲಿನ ಜನರನ್ನು ತಲುಪುತ್ತಿದೆ. ತೈಲ ಮತ್ತು ಸಂವಹನ, ಸಂಪರ್ಕ ವ್ಯವಸ್ಥೆಯ ಕೊರತೆಯಿಂದಾಗಿ ಅಲ್ಲಿನ ಜನರನ್ನು ತಲುಪಲು ಸಾಧ್ಯವಾಗುತ್ತಿಲ್ಲ. ಟಿಗ್ರೆ ವಲಯದಲ್ಲಿ ಅಪೌಷ್ಟಿಕತೆಯ ಪ್ರಮಾಣ, ರುಚಿ ಗ್ರಹಿಸುವ ಶಕ್ತಿ ಕಳೆದುಕೊಳ್ಳುವ, ಚರ್ಮದ ಕಾಯಿಲೆಯ, ಮಾನಸಿಕ ಸ್ಥಿಮಿತ ಕಳೆದುಕೊಳ್ಳುವ ಪ್ರಕರಣ ಹೆಚ್ಚಿದೆ ಎಂದು ಗ್ರಿಫಿತ್ ಕಳವಳ ವ್ಯಕ್ತಪಡಿಸಿದ್ದಾರೆ.‌

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News