ಯುವಕರು ಹೊಣೆಗಾರಿಕೆ ಅರಿತು ನಡೆದುಕೊಳ್ಳಬೇಕು: ಡಾ. ಅಬ್ದುಲ್ ಹಮೀದ್ ನದ್ವಿ

Update: 2021-09-30 17:24 GMT

ಭಟ್ಕಳ: ಸಮಾಜದ ಬದಲಾವಣೆಯಲ್ಲಿ ಯುವಕರು ಮಹತ್ತರ ಪಾತ್ರ ವಹಿಸುತ್ತಿದ್ದು ತಮ್ಮ ಹೊಣೆಗಾರಿಕೆಗಳನ್ನು ಅರಿತು ನಡೆದುಕೊಳ್ಳಬೇಕೆಂದು ಜಾಮಿಯಾ ಇಸ್ಲಾಮಿಯಾದ ಪ್ರಾಧ್ಯಾಪಕ ಡಾ.ಅಬ್ದುಲ್ ಹಮೀದ್ ಅಥರ್ ನದ್ವಿ ಹೇಳಿದರು. 

ಅವರು ಗುರುವಾರ ಸಂಜೆ ಆಜಾದ್‍ನಗರದಲ್ಲಿರುವ ಗ್ರೀನ್ ಪ್ಯಾರಾಡೈಸ್ ನಲ್ಲಿ ಭಟ್ಕಳ ಮುಸ್ಲಿಮ್ ಯುತ್ ಫೆಡರೇಶನ್ ಆಯೋಜಿಸಿದ್ದ “ಯುವಕ ಸಂಘಟನೆಗಳು ಮತ್ತು ನಮ್ಮ ಹೊಣೆಗಾರಿಕೆಗಳು” ಎಂಬ ವಿಷಯದಲ್ಲಿ ನಡೆದ ಕಾರ್ಯಾಗಾರದಲ್ಲಿ ಮುಖ್ಯಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.

ಯುವಕ ಸಂಘಟನೆಗಳು ಕೇವಲ ಕ್ರೀಡೆಗಳಿಗೆ ಮಾತ್ರ ಸೀಮಿತಗೊಳ್ಳದೆ ಸಾಮಾಜಿಕವಾಗಿ ಬಹಳಷ್ಟು ಹೊಣೆಗಾರಿಕೆಗಳಿದ್ದು ತಮ್ಮ ತಮ್ಮ ಪ್ರದೇಶದಲ್ಲಿ ಸಾಮಾಜಿಕ ಸೇವೆಗಳಲ್ಲಿ ತೊಡಗಿಸಿಕೊಳ್ಳಬೇಕು, ತಮ್ಮ ವ್ಯಾಪ್ತಿಯಲ್ಲಿ ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಗುರುತಿಸಿ ಅವರಿಗೆ ಶಿಕ್ಷಣ ನೀಡುವಂತಹ ಕೆಲಸ ಮಾಡಬೇಕು, ತಮ್ಮ ಪ್ರದೇಶದವನ್ನು ಸ್ವಚ್ಚವಾಗಿಟ್ಟುಕೊಳ್ಳುವುದು, ಇತರರ ನೆರವಿಗೆ ಧಾವಿಸುವುದು ಕ್ರೀಡಾ ಮತ್ತು ಯುವಕ ಸಂಘಟನೆಗಳ ಕೆಲಸವಾಗಬೇಕು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಭಟ್ಕಳ ಮುಸ್ಲಿಮ್ ಯುತ್ ಫೆಡರೇಷನ್ ಅಧ್ಯಕ್ಷ ಮೌಲಾನ ಅಝೀಝುರ್ರಹ್ಮಾನ್ ರುಕ್ನುದ್ದೀನ್ ನದ್ವಿ, ಭಟ್ಕಳದ ವಿವಿಧ ಕ್ರೀಡಾ ಮತ್ತು ಯುವಕ ಸಂಘಗಳ ಒಕ್ಕೂಟವಾಗಿರುವ ಭಟ್ಕಳಮುಸ್ಲಿಮ್ ಯುತ್ ಫೆಡರೇಷನ್ ಯುವಕರಿಗೆ ಮಾರ್ಗ ದರ್ಶನ ಮಾಡುವಂತಹ ಅವರನ್ನು ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವಂತೆ ಪ್ರೇರೇಪಿಸುತ್ತದೆ. ಅದೇ ರೀತಿ ಅವರು ತಮ್ಮ ಬದುಕಿ ನಲ್ಲಿ ಮೌಲ್ಯಗಳನ್ನು ಬೆಳೆಸಿಕೊಳ್ಳುವಂತೆ ಯುವ ಸಮುದಾಯವನ್ನು ತರಬೇತುಗೊಳಿಸುತ್ತದೆ ಎಂದರು.

ಸಂಘಟನೆಯ ಪ್ರಧಾನಕಾರ್ಯದರ್ಶಿ ಉಮೈರ್ ರುಕ್ನುದ್ದೀನ್ ಪ್ರಸ್ತಾವಿಕವಾಗಿ ಮಾತನಾಡಿ ಎಲ್ಲರನ್ನೂ ಸ್ವಾಗತಿಸಿದರು. ಉಪಾಧ್ಯಕ್ಷ ಮೌಲಾನ ಅಂಜುಮ್ ಗಂಗಾವಳಿ ನದ್ವಿ ಕಾರ್ಯಕ್ರಮ ನಿರೂಪಿಸಿದರು.

ವೇದಿಕೆಯಲ್ಲಿ ಕ್ರೀಡಾ ಕಾರ್ಯದರ್ಶಿ ಮುಹಮ್ಮದ್ ತಲ್ಹಾ ತಿರುಚನಪಳ್ಳಿ, ಜೊತೆ ಕಾರ್ಯದರ್ಶಿ ವಸಿಯುಲ್ಲಾ ಡಿ.ಎಫ್, ಅತಿದ್ ರುಕ್ನುದ್ದಿನ್ ಸೇರಿದಂತೆ ಇತರರು ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News