ಗಂಗೊಳ್ಳಿ: ಗೋಹತ್ಯೆ ವಿರೋಧಿಸಿ ಹಿಂಜಾವೇ ಪ್ರತಿಭಟನೆ
ಕುಂದಾಪುರ ಅ.1: ಗೋ ಹತ್ಯೆ ವಿರೋಧಿಸಿ ಮತ್ತು ಗೋ ಹಂತಕರನ್ನು ಗಡಿಪಾರು ಮಾಡುವಂತೆ ಆಗ್ರಹಿಸಿ ಹಿಂದೂ ಜಾಗರಣ ವೇದಿಕೆ ಗಂಗೊಳ್ಳಿ ಘಟಕದ ವತಿಯಿಂದ ಶುಕ್ರವಾರ ಗಂಗೊಳ್ಳಿಯಲ್ಲಿ ಪ್ರತಿಭಟನೆ ನಡೆಸಲಾಯಿತು.
ಪೋರ್ಟ್ ಆಫೀಸ್ ಬಳಿಯಿಂದ ಕಾಲ್ನಡಿಗೆ ಮೆರವಣಿಗೆ ಆರಂಭವಾಗಿ ರಾಮಮಂದಿರದ ತನಕ ಸಾಗಿತು. ಬಳಿಕ ಗಂಗೊಳ್ಳಿ ವಿರೇಶ್ವರ ದೇವಸ್ಥಾನದಲ್ಲಿ ನಡೆದ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಹಿಂಜಾವೇ ಕರ್ನಾಟಕ ದಕ್ಷಿಣ ಪ್ರಾಂತ್ಯದ ಪ್ರಧಾನ ಕಾರ್ಯದರ್ಶಿ ಟಿ.ಕೆ.ಉಲ್ಲಾಸ್, ಗಂಗೊಳ್ಳಿಯಲ್ಲಿ ಅಮಾನುಷವಾಗಿ ಮತ್ತು ಭಯಾನಕ ರೀತಿಯಲ್ಲಿ ಗೋವುಗಳನ್ನು ಕೊಯ್ದು ಅದನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟು ವಿಕೃತ ಮೆರೆಯಲಾಗಿದೆ. ಈ ವಿಡಿಯೋ ವೈರಲ್ ವಿಚಾರದಲ್ಲಿ ಹಿಂದೂಗಳ ಮೇಲೆ ಕೇಸ್ ದಾಖಲು ಮಾಡಲಾಗಿದೆ. ಶಾಂತಿ ಕದಡುವ ವಿಡಿಯೋ ಮಾಡಿ ಹರಿ ಬಿಟ್ಟವರ ವಿರುದ್ಧ ಪೊಲೀಸರು ಪ್ರಕರಣ ದಾಖಲು ಮಾಡುವ ಬದಲು ಗೋರಕ್ಷಕರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಆರೋಪಿಸಿದರು.
ಈ ಬಗ್ಗೆ ತಹಶೀಲ್ದಾರ್ ಕಿರಣ್ ಗೌರಯ್ಯ ಅವರಿಗೆ ಮನವಿ ಸಲ್ಲಿಸಲಾಯಿತು. ಹಿಜಾವೇ ಮುಖಂಡರಾದ ಪ್ರಕಾಶ್ ಕುಕ್ಕೆಹಳ್ಳಿ, ಪ್ರಶಾಂತ್ ನಾಯಕ್, ಗೋವಿಂದ ಶೇರುಗಾರ್, ವಾಸುದೇವ ಗಂಗೊಳ್ಳಿ, ನವೀನ್ ಗಂಗೊಳ್ಳಿ, ಯಶವಂತ್ ಗಂಗೊಳ್ಳಿ, ಮಹೇಶ್ ಬೈಂದೂರು ಮೊದಲಾದವರು ಉಪಸ್ಥಿತರಿದ್ದರು.
ಪ್ರತಿಭಟನೆ ಹಿನ್ನೆಲೆಯಲ್ಲಿ ಗಂಗೊಳ್ಳಿ ಪೇಟೆ ಬಂದ್ ಆಗಿತ್ತು. ಮುಂಜಾಗ್ರತಾ ಕ್ರಮವಾಗಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಿದ್ದು ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕುಮಾರಚಂದ್ರ ನೇತೃತ್ವದಲ್ಲಿ ಡಿವೈಎಸ್ಪಿಶ್ರೀಕಾಂತ್, ಬೈಂದೂರು ಸಿಪಿಐ ಸಂತೋಷ್ ಕಾಯ್ಕಿಣಿ ಭದ್ರತೆ ಒದಗಿಸಿದ್ದರು.