ಮಾತೃತ್ವ ಸೌಲಭ್ಯ ಕಾಯ್ದೆಯಡಿ ದತ್ತು ತಾಯಂದಿರಿಗೆ ರಜೆ ಅವಕಾಶ ಕುರಿತು ಕೇಂದ್ರಕ್ಕೆ ಸುಪ್ರೀಂ ನೋಟಿಸ್

Update: 2021-10-01 14:53 GMT

ಹೊಸದಿಲ್ಲಿ,ಅ.1: ಮೂರು ತಿಂಗಳಿಗೂ ಕಡಿಮೆ ಪ್ರಾಯದ ಮಕ್ಕಳನ್ನು ದತ್ತು ಪಡೆದುಕೊಳ್ಳುವ ದತ್ತು ತಾಯಂದಿರು ಮಾತ್ರ 12 ವಾರಗಳ ಮಾತೃತ್ವ ರಜೆಗೆ ಅರ್ಹರಾಗಿರುತ್ತಾರೆ ಎಂಬ ಮಾತೃತ್ವ ಸೌಲಭ್ಯ ಕಾಯ್ದೆಯಲ್ಲಿನ ಕಲಂ 5(4)ರ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ಕುರಿತು ಸರ್ವೋಚ್ಚ ನ್ಯಾಯಾಲಯವು ಶುಕ್ರವಾರ ಕೇಂದ್ರಕ್ಕೆ ನೋಟಿಸನ್ನು ಹೊರಡಿಸಿದೆ.


ಈ ನಿಬಂಧನೆಯು ದತ್ತು ತಾಯಂದಿರ ಬಗ್ಗೆ ತಾರತಮ್ಯ ಮತ್ತು ನಿರಂಕುಶತೆಯಿಂದ ಕೂಡಿದೆ ಎಂದು ಹಂಸನಂದಿನಿ ನಂದೂರಿ ಅವರು ತನ್ನ ಅರ್ಜಿಯಲ್ಲಿ ದೂರಿದ್ದಾರೆ. ಕೇಂದ್ರಕ್ಕೆ ನೋಟಿಸ್ ಹೊರಡಿಸಿದ ನ್ಯಾಯಮೂರ್ತಿಗಳಾದ ಎಸ್.ಅಬ್ದುಲ್ ನಝೀರ್ ಮತ್ತು ಕೃಷ್ಣ ಮುರಾರಿ ಅವರ ಪೀಠವು ಅರ್ಜಿಗೆ ಉತ್ತರಿಸುವಂತೆ ಸೂಚಿಸಿದೆ. 


ಮಾತೃತ್ವ ಸೌಲಭ್ಯ ಕಾಯ್ದೆ,1961ರಲ್ಲ್ಲಿ ಮೂರು ತಿಂಗಳಿಗೂ ಹೆಚ್ಚಿನ ಪ್ರಾಯದ ಅನಾಥ,ಪರಿತ್ಯಕ್ತ ಮಗುವನ್ನು ದತ್ತು ಪಡೆದುಕೊಳ್ಳುವ ತಾಯಂದಿರಿಗೆ ರಜೆಗೆ ಅವಕಾಶವೇ ಇಲ್ಲ. ಇಂತಹ ತಾರತಮ್ಯದಿಂದಾಗಿ ಪೋಷಕರು ಮೂರು ತಿಂಗಳಿಗೂ ಹೆಚ್ಚಿನ ಪ್ರಾಯದ ಮಕ್ಕಳಿಗಿಂತ ನವಜಾತ ಶಿಶುಗಳನ್ನು ದತ್ತು ಪಡೆದುಕೊಳ್ಳುವುದಕ್ಕೆ ಆದ್ಯತೆ ನೀಡುವಂತಾಗುತ್ತದೆ. ಹೀಗಾಗಿ ಈ ನಿಬಂಧನೆಯು ಜೈವಿಕ ಮತ್ತು ದತ್ತು ತಾಯಂದಿರ ನಡುವೆ ಮಾತ್ರವಲ್ಲ,ಮೂರು ತಿಂಗಳಿಗೂ ಹೆಚ್ಚಿನ ಪ್ರಾಯದ ಮಕ್ಕಳ ನಡುವೆಯೂ ತಾರತಮ್ಯವನ್ನುಂಟು ಮಾಡುತ್ತದೆ ಎಂದು ವಾದಿಸಿರುವ ಅರ್ಜಿದಾರರು,ಜೈವಿಕ ತಾಯಂದಿರಿಗೆ ಹೋಲಿಸಿದರೆ ದತ್ತು ತಾಯಂದಿರಿಗೆ ಒದಗಿಸಲಾಗಿರುವ ರಜಾ ಅವಧಿಯ ಬಗ್ಗೆಯೂ ಆಕ್ಷೇಪವನ್ನೆತ್ತಿದ್ದಾರೆ. ದತ್ತು ತಾಯಂದಿರು 12 ವಾರಗಳ ಮಾತೃತ್ವ ರಜೆಯನ್ನು ಪಡೆಯುತ್ತಿದ್ದರೆ,ಜೈವಿಕ ತಾಯಂದಿರಿಗೆ 26 ವಾರಗಳ ರಜೆ ಅವಕಾಶವನ್ನು ಒದಗಿಸಲಾಗಿದೆ ಎಂದು ಅವರು ಬೆಟ್ಟು ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News