ತಂದೆತಾಯಿ, ಗುರುಗಳ ಗುಣಗಳನ್ನು ಜೀವನದಲ್ಲಿ ಅಳವಡಿಸಿ: ಅದಮಾರು ಹಿರಿಯ ಶ್ರೀ
ಉಡುಪಿ, ಅ.1: ಹೆತ್ತ ತಂದೆ ತಾಯಿ ಮತ್ತು ಹೊತ್ತ ಗುರುಗಳ ಗುಣಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಬದುಕಬೇಕು. ನಮ್ಮ ಗುರು ಗಳು ಧೈರ್ಯವಂತರು, ಸಮಯಪ್ರಜ್ಞೆ ಹಾಗೂ ಅಪಾರವಾದ ದೇಶಭಕ್ತಿ ಇದ್ದು ಸದೃಢ ದೇಶ ಕಟ್ಟಲು ವಿದ್ಯಾಸಂಸ್ಥೆಗಳನ್ನು ಸ್ಥಾಪಿಸಲು ಹಗಲಿರುಳು ಸಾಧಿಸಿ ಸಮಾಜಕ್ಕೆ ಉತ್ತಮ ವ್ಯಕ್ತಿಗಳನ್ನು ನೀಡಿ ಸೇವೆ ಸಲ್ಲಿಸಿದರು ಎಂದು ಅದಮಾರು ಹಿರಿಯ ಮಠಾಧೀಶ ಶ್ರೀವಿಶ್ವಪ್ರಿಯತೀರ್ಥ ಸ್ವಾಮೀಜಿ ಹೇಳಿದ್ದಾರೆ.
ಉಡುಪಿ ಕೃಷ್ಣಮಠದ ರಾಜಾಂಗಣದಲ್ಲಿ ಶುಕ್ರವಾರ ಆಯೋಜಿಸಲಾದ ಅದಮಾರು ಮಠದ ಶ್ರೀವಿಭುದೇಶತೀರ್ಥ ಸ್ವಾಮೀಜಿಯ ಆರಾಧನೆಯ ಪ್ರಯುಕ್ತ ಸಂಸ್ಮರಣಾ ಕಾರ್ಯಕ್ರಮನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಪರ್ಯಾಯ ಪೀಠಾಧೀಶ ಶ್ರೀಈಶಪ್ರಿಯತೀರ್ಥ ಸ್ವಾಮೀಜಿ ಮಾತನಾಡಿ, ಗುರುಗಳು ಉಪನಿಷತ್ತಿನ ಬಗ್ಗೆ ಅಪಾರವಾದ ಕಾಳಜಿಯಿದ್ದವರು. ಸ್ವಾತಂತ್ರ್ಯ ಪೂರ್ವದಲ್ಲಿ ಹಾಗೂ ನಂತರದ ಕಾಲದಲ್ಲಿದ್ದ ಅವರು, ಇಂಗ್ಲಿಷ್ ಭಾಷೆಯ ಬಗ್ಗೆ ಸಾಮಾನ್ಯ ಜ್ಞಾನ ಇರಬೇಕೆಂಬ ಆಶಯದಿಂದ ಶಾಲಾ ಕಾಲೇಜುಗಳನ್ನು ಸ್ಥಾಪಿಸಿ ವಿದ್ಯಾವಂತರು ನಮ್ಮ ದೇಶದಲ್ಲಿಯೇ ಉಳಿಯಬೇಕೆಂಬ ಹಂಬಲದಿಂದ ಸಂಶೋಧನಾ ಕೇಂದ್ರ ಆರಂಭಿಸಿ ದರು. ಅಂತಹ ಶ್ರೇಷ್ಠರ ಚಿಂತನೆಯನ್ನು ಸದಾ ನೆನೆಯುತ್ತಿರುವುದು ನಮ್ಮ ಕರ್ತವ್ಯ ಎಂದರು.
ಪೇಜಾವರ ಮಠಾಧೀಶ ಶ್ರೀವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ, ಗುರುಗಳು ವೇದಾಂತ ಹಾಗೂ ವಿಜ್ಞಾನದ ತತ್ವವನ್ನು ಪಡೆದು ಸಾಧಿಸಿದವರು. ಹಳ್ಳಿಯಿಂದ ಡೆಲ್ಲಿಯವರೆಗೆ ವಿದ್ಯಾಲಯಗಳನ್ನು ಸ್ಥಾಪಿಸಿ ಸಹಸ್ರಾರು ವಿದ್ಯಾರ್ಥಿಗಳಿಗೆ ಗುಣಮಟ್ಟದ ವಿದ್ಯಾರ್ಜನೆ ನೀಡಿದವರು. ಅದಮಾರಿನಂತಹ ಹಳ್ಳಿಯಲ್ಲಿ ಆದರ್ಶ ಗುರುಕುಲವನ್ನು ಸ್ಥಾಪಿಸಿ ವೇದಾಂತ ಅಧ್ಯಯನ ಮಾಡುವವರಿಗೆ ಮಾರ್ಗರ್ಶಕರಾಗಿದ್ದರು ಎಂದು ತಿಳಿಸಿದರು.