ಟ್ರಾಫಿಕ್ ವಿಶೇಷ ಕಾರ್ಯಾಚರಣೆ: ಅ.2ಕ್ಕೆ ವಾಹನಗಳ ಹೊಗೆ ತಪಾಸಣೆ
ಮಂಗಳೂರು, ಅ.1: ಸಂಚಾರ ನಿಯಮ ಉಲ್ಲಂಘಿಸುವವರ ವಿರುದ್ಧ ಮಂಗಳೂರು ಪೊಲೀಸರು ಹಮ್ಮಿಕೊಂಡಿರುವ ಆರು ದಿನಗಳ ವಿಶೇಷ ಕಾರ್ಯಾಚರಣೆಯಲ್ಲಿ 5 ದಿನಗಳಲ್ಲಿ 17.50 ಲಕ್ಷ ರೂ.ಗೂ ಅಧಿಕ ದಂಡ ವಸೂಲಿ ಮಾಡಲಾಗಿದೆ.
ಸೆ.27ರಂದು ಟಿಂಟೆಡ್ ಗ್ಲಾಸ್ ಹಾಕಿದ್ದಕ್ಕೆ 533 ಪ್ರಕರಣ ದಾಖಲಿಸಿ 2.66 ಲಕ್ಷ ರೂ., ಸೆ.28ರಂದು ನಂಬರ್‌ಪ್ಲೇಟ್ ದೋಷದ ಬಗ್ಗೆ 928 ಪ್ರಕರಣ ದಾಖಲಿಸಿ 4.50 ಲಕ್ಷ ರೂ., ಸೆ.29ರಂದು ಹೆಲ್ಮೆಟ್ ಬಗ್ಗೆ ಕಾರ್ಯಾಚರಣೆ ನಡೆಸಿ 725 ಪ್ರಕರಣ ದಾಖಲಿಸಿ 3.64 ಲಕ್ಷ ರೂ, ಸೆ.30ರಂದು ವಿಮೆ ದಾಖಲೆ ತಪಾಸಣೆ ನಡೆಸಿ 91 ಪ್ರಕರಣ ದಾಖಲಿಸಿ 98,500 ರೂ. ದಂಡ ದಾಖಲಿಸಿಕೊಳ್ಳಲಾಗಿದೆ.
ಶುಕ್ರವಾರದಂದು ಹಳೆಯ ಪ್ರಕರಣಗಳಿಗೆ ಸಂಬಂಧಿಸಿದಂತೆ ವಾಹನಗಳ ತಪಾಸಣೆ ನಡೆಸಲಾಗಿದ್ದು ಒಂದೇ ದಿನ 1,003ಕ್ಕೂ ಅಧಿಕ ಪ್ರಕರಣ ದಾಖಲಿಸಲಾಗಿದೆ. ಅಂತಹವರಿಂದ 5.71 ಲಕ್ಷ ರೂ.ಗೂ ಅಧಿಕ ದಂಡ ವಸೂಲಿ ಮಾಡಲಾಗಿದೆ. ಶನಿವಾರ ವಿಶೇಷ ಕಾರ್ಯಾಚರಣೆಯ ಕೊನೆಯ ದಿನವಾಗಿದ್ದು, ವಾಹನಗಳ ಹೊಗೆ ತಪಾಸಣೆ ನಡೆಯಲಿದೆ ಎಂದು ಮಂಗಳೂರು ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ತಿಳಿಸಿದ್ದಾರೆ.