ವೆನೆಝುವೆಲಾ: ನೂತನ ಕರೆನ್ಸಿ ಜಾರಿ

Update: 2021-10-01 16:36 GMT

ಕರಾಕಸ್, ಅ.1: ನೂತನ ಕರೆನ್ಸಿಯನ್ನು ಜಾರಿಗೊಳಿಸಲು ವೆನೆಝುವೆಲಾ ನಿರ್ಧರಿಸಿದ್ದು , ಇದುವರೆಗೆ ಚಾಲ್ತಿಯಲ್ಲಿದ್ದ 1 ಮಿಲಿಯನ್ ಬೊಲಿವರ್ ನೋಟಿನ ಬದಲು 1 ಬೊಲಿವರ್ ನೋಟು ಮುಖಬೆಲೆಯ ಕರೆನ್ಸಿಯನ್ನು ಜಾರಿಗೊಳಿಸಲಾಗುವುದು ಎಂದು ಸರಕಾರ ಹೇಳಿದೆ.

ವೆನೆಝುವೆಲಾದಲ್ಲಿ ಈ ಹಿಂದೆ 1 ಮಿಲಿಯನ್ ಬೊಲಿವರ್ ನೋಟು ಗರಿಷ್ಟ ಮುಖಬೆಲೆಯ ಕರೆನ್ಸಿಯಾಗಿತ್ತು(ಸುಮಾರು 0.25 ಡಾಲರ್ ವೌಲ್ಯ). ಇದೀಗ ಈ ಕರೆನ್ಸಿಯ 6 ‘ಸೊನ್ನೆಗಳು’ ರದ್ದಾಗಲಿದ್ದು ಇದರ ಬದಲು 1 ಬೊಲಿವರ್ ನೋಟಿನ ಕರೆನ್ಸಿ ಜಾರಿಗೆ ಬರಲಿದೆ. ಶುಕ್ರವಾರದಿಂದ ಜಾರಿಗೆ ಬಂದಿರುವ ನೂತನ ಕರೆನ್ಸಿ ವ್ಯವಸ್ಥೆಯಲ್ಲಿ 100 ಬೊಲಿವರ್ ನೋಟು ಅತ್ಯಧಿಕ ಮುಖಬೆಲೆಯ ಕರೆನ್ಸಿಯಾಗಲಿದೆ.

 ಈ ಬಗ್ಗೆ ಕಳೆದ ಸೆಪ್ಟಂಬರ್ ನಲ್ಲೇ ಘೋಷಿಸಿದ್ದ ವೆನೆಝುವೆಲಾದ ಸೆಂಟ್ರಲ್ ಬ್ಯಾಂಕ್ , ಬೊಲಿವರ್ನ ಮುಖಬೆಲೆ ಹೆಚ್ಚಳ ಅಥವಾ ಕಡಿತದ ಪ್ರಶ್ನೆ ಇದಲ್ಲ, ಹಣಕಾಸು ವ್ಯವಸ್ಥೆಯಲ್ಲಿ ಬಳಕೆಗೆ ಅನುವು ಮಾಡಿಕೊಡುವುದು ಇಲ್ಲಿ ಮುಖ್ಯವಾಗಿದೆ ಎಂದಿತ್ತು. ದೀರ್ಘ ಸೊನ್ನೆಗಳ ಸಾಲಿನಿಂದ ಆಗುತ್ತಿದ್ದ ಗೊಂದಲವನ್ನು ನಿವಾರಿಸಿ, ಈ ಬದಲಾವಣೆ ನಗದು ವ್ಯವಹಾರ, ಲೆಕ್ಕಪತ್ರ ವ್ಯವಹಾರವನ್ನು ಸರಳಗೊಳಿಸಲಿದೆ. 

ಹಣದುಬ್ಬರವು ಜನತೆಯ ದೈನಂದಿನ ವ್ಯವಹಾರದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದ್ದು, ಜನರು ಅಮೆರಿಕದ ಡಾಲರ್ ಅಥವಾ ಆನ್ಲೈನ್ ಮಾಧ್ಯಮವನ್ನು ಪಾವತಿಗೆ ನೆಚ್ಚಿಕೊಳ್ಳುವ ಪರಿಸ್ಥಿತಿಯಿದೆ ಎಂದು ಸೆಂಟ್ರಲ್ ಬ್ಯಾಂಕ್ ಹೇಳಿದೆ.
 2013ರಿಂದ ತೀವ್ರ ಆರ್ಥಿಕ ಹಿಂಜರಿತದ ಸಮಸ್ಯೆ ಎದುರಿಸುತ್ತಿರುವ ವೆನೆಝುವೆಲಾದ ಜಿಡಿಪಿಯಲ್ಲಿ 80%ದಷ್ಟು ಕುಸಿತ ದಾಖಲಾಗಿದ್ದು ದೇಶದ ಅಧಿಕೃತ ಕರೆನ್ಸಿ ಬೊಲಿವರ್ ಬಹುತೇಕ ಮೌಲ್ಯ ಕಳೆದುಕೊಂಡಿದೆ. 2021ರ ಅಂತ್ಯಕ್ಕೆ ವೆನೆಝುವೆಲಾದ ಹಣದುಬ್ಬರದ ಪ್ರಮಾಣ 5,500% ಆಗಿರಲಿದೆ ಎಂದು ಅಂತರಾಷ್ಟ್ರೀಯ ಹಣಕಾಸು ನಿಧಿ ಅಂದಾಜಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News