ದಸರಾ; ಕೋವಿಡ್ ಮಾರ್ಗಸೂಚಿ ಪಾಲಿಸಿ ಆಚರಿಸಲು ನಿರ್ಧಾರ: ದ.ಕ. ಜಿಲ್ಲಾಧಿಕಾರಿ
ಮಂಗಳೂರು, ಅ.1: ಕೋವಿಡ್ ಸೋಂಕು ಹಿನ್ನೆಲೆಯಲ್ಲಿ ಮುಂಬರುವ ನವರಾತ್ರಿ (ದಸರಾ) ಉತ್ಸವವನ್ನು ಜಿಲ್ಲೆಯ ಕಟೀಲು ದುರ್ಗಾ ಪರಮೇಶ್ವರಿ, ಕುದ್ರೋಳಿ ಗೋಕರ್ಣನಾಥೇಶ್ವರ ಹಾಗೂ ಮಂಗಳಾದೇವಿ ಸೇರಿದಂತೆ ಇತರ ದೇವಸ್ಥಾನಗಳಲ್ಲಿ ಜಿಲ್ಲಾಡಳಿತ ಕಳೆದ ವರ್ಷ ಹೊರಡಿಸಿದ ಮಾರ್ಗಸೂಚಿಗಳಂತೆಯೇ ಈ ಬಾರಿಯೂ ಆಚರಿಸುವುದು ಸೂಕ್ತ ಎಂದು ಮೀನುಗಾರಿಕೆ, ಬಂದರು ಹಾಗೂ ಒಳನಾಡು ಜಲಸಾರಿಗೆ ಸಚಿವ ಎಸ್.ಅಂಗಾರ ಅಭಿಪ್ರಾಯಪಟ್ಟರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ನಡೆದ ನವರಾತ್ರಿ ಉತ್ಸವ ಆಚರಣೆ ಕುರಿತ ಜಿಲ್ಲಾ ಧಾರ್ಮಿಕ ಪರಿಷತ್ತಿನ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕೋವಿಡ್-19 ಸೋಂಕು ಹಿನ್ನೆಲೆಯಲ್ಲಿ ಕಳೆದ ಬಾರಿ ನವರಾತ್ರಿ ಉತ್ಸವ (ದಸರಾ) ಆಚರಣೆ ಕುರಿತಂತೆ ಜಿಲ್ಲಾಡಳಿತ ಮಾರ್ಗಸೂಚಿಗಳನ್ನು ಪ್ರಕಟಿಸಿತ್ತು. ಅದರಂತೆ ದೇವಸ್ಥಾನಗಳ ಆಡಳಿತ ಮಂಡಳಿಗಳು, ಪ್ರಮುಖವಾಗಿ ಭಕ್ತರು ಸಹಕರಿಸಿದ್ದರು. ಈ ಬಾರಿಯೂ ಕೋವಿಡ್ 3ನೇ ಅಲೆ ಎದುರಾದಲ್ಲಿ ಮತ್ತೊಮ್ಮೆ ಜಿಲ್ಲೆಯಲ್ಲಿ ಲಾಕ್‌ಡೌನ್ ಮಾಡುವ ಸಂದರ್ಭವನ್ನು ತಳ್ಳಿಹಾಕುವಂತಿಲ್ಲ. ಸಮಸ್ಯೆ ಬಿಗಡಾಯಿಸದಂತೆ ನಮಗೆ ನಾವೇ ತಡೆ ಹಾಕಿಕೊಳ್ಳಬೇಕಿದೆ ಎಂದರು.
ದೇವಸ್ಥಾನಗಳಿಗೆ ಬರುವ ಭಕ್ತರಿಗೆ ಕೋವಿಡ್ ವ್ಯಾಕ್ಸಿನ್ ಪ್ರಯೋಜನದ ಬಗ್ಗೆ ದೇವಸ್ಥಾನಗಳಲ್ಲಿ ಜಾಗೃತಿ ಮೂಡಿಸಬೇಕು. ದೇವಸ್ಥಾನದ ಆವರಣದಲ್ಲಿಯೇ ಜಿಲ್ಲಾಡಳಿತದ ಸಹಯೋಗದಲ್ಲಿ ಲಸಿಕಾ ಶಿಬಿರವನ್ನು ಏರ್ಪಡಿಸಬೇಕು ಎಂದು ಅವರು ಸಲಹೆ ನೀಡಿದರು.
ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಮಾತನಾಡಿ, ದಸರಾ ಸಂದರ್ಭದಲ್ಲಿ ಕೋವಿಡ್ ಸಮುಚಿತ ವರ್ತನೆಯನ್ನು ಪಾಲಿಸಿಕೊಂಡು ದೇವಸ್ಥಾನ ದಲ್ಲಿ ದರ್ಶನ ಹಾಗೂ ಸೇವೆಯನ್ನು ನಿರ್ವಹಿಸಬೇಕು. ಮಾಸ್ಕ್ ಧಾರಣೆ ಕಡ್ಡಾಯ ಹಾಗೂ ಸುರಕ್ಷಿತ ಅಂತರ ಪಾಲನೆ ಎಲ್ಲರ ಜವಾಬ್ದಾರಿ ಯಾಗಿದೆ. ಕಳೆದ ವರ್ಷ ಹೊರಡಿಸಲಾದ ಮಾರ್ಗಸೂಚಿಗಳಂತೆ ಈ ಬಾರಿಯೂ ಜಿಲ್ಲಾಡಳಿತದಿಂದ ಹೊರಡಿಸಲಾಗುವ ಮಾರ್ಗಸೂಚಿಗಳ ಅನ್ವಯ ದಸರಾ ಆಚರಣೆಗೆ ದೇವಸ್ಥಾನದ ಆಡಳಿತ ಮಂಡಳಿಗಳು ಸಹಕಾರ ನೀಡಬೇಕು ಎಂದರು.
ಜಿಲ್ಲೆಯಾದ್ಯಂತ ಅ.2ರಿಂದ ಸ್ವಚ್ಛ ಭಾರತ್ ಅಭಿಯಾನ ಹಮ್ಮಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಸ್ವಯಂ ಸೇವಕರು ಹಾಗೂ ಭಕ್ತರ ಸಹಕಾರದಲ್ಲಿ ಜಿಲ್ಲೆಯ ಎಲ್ಲ ದೇವಸ್ಥಾನಗಳಲ್ಲಿ ಪ್ಲಾಸ್ಟಿಕ್ ತ್ಯಾಜ್ಯವನ್ನು ಸಂಗ್ರಹಿಸಿ ಅದರ ವಿಲೇವಾರಿಗೆ ಸಹಕರಿಸುವಂತೆಯೂ ಅವರು ಕರೆ ನೀಡಿದರು. ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ರವಿಶಂಕರ್ ಮಿಜಾರು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಕಿಶೋರ್, ಜಿಲ್ಲಾ ಧಾರ್ಮಿಕ ಪರಿಷತ್‌ನ ಅಧ್ಯಕ್ಷ ಗಿರಿಪ್ರಸಾದ್, ಸದಸ್ಯರು ಹಾಗೂ ವಿವಿಧ ದೇವಸ್ಥಾನಗಳ ಆಡಳಿತ ಮಂಡಳಿಗಳ ಪದಾಧಿಕಾರಿಗಳು ಸಭೆಯಲ್ಲಿದ್ದರು.