ಫ್ರಾನ್ಸ್: ಸರಣಿ ಹತ್ಯಾಕಾಂಡ ತಪ್ಪೊಪ್ಪಿಕೊಂಡ ಪೊಲೀಸ್ ಅಧಿಕಾರಿ

Update: 2021-10-01 16:37 GMT

ಪ್ಯಾರಿಸ್, ಅ.1: ಫ್ರಾನ್ಸ್ನಲ್ಲಿ ಭದ್ರತಾ ತಂಡಗಳ ನಿದ್ದೆಗೆಡಿಸಿದ್ದ ಭಯಾನಕ ಸರಣಿ ಹತ್ಯೆಗಳ ಹಂತಕನಿಗಾಗಿ ದಶಕಗಳ ಕಾಲ ನಡೆಸಿದ ಶೋಧ ಕಾರ್ಯಾಚರಣೆಗೆ ಅಂತ್ಯ ದೊರಕಿದ್ದು, ಮಾಜಿ ಮಿಲಿಟರಿ ಪೊಲೀಸ್ ಅಧಿಕಾರಿಯೇ ಈ ಹಂತಕ ಎಂದು ಆತ ಆತ್ಮಹತ್ಯೆಯ ಸಂದರ್ಭ ಬರೆದಿಟ್ಟ ಸುಸೈಡ್ ನೋಟ್ನಿಂದ ದೃಢಪಟ್ಟಿದೆ ಎಂದು ಮಾಧ್ಯಮಗಳು ಹೇಳಿವೆ.

 ಮಾಜಿ ಮಿಲಿಟರಿ ಪೊಲೀಸ್ ಅಧಿಕಾರಿ ಫ್ರಾಂಕೋಯಿಸ್ ವೆರೋವ್ನ ಮೃತದೇಹ ಫ್ರಾನ್ಸ್ ನ ದಕ್ಷಿಣ ಪ್ರಾಂತ್ಯದ ಲೆಗ್ರು ಡುರೋಯ್ ಎಂಬ ಪಟ್ಟಣದಲ್ಲಿ ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಬುಧವಾರ ಪತ್ತೆಯಾಗಿತ್ತು. ಮೃತದೇಹದ ಬಳಿ ದೊರಕಿದ ಸುಸೈಡ್ ನೋಟ್ ನಲ್ಲಿ ವೆರೋವ್ ತಪ್ಪೊಪ್ಪಿಕೊಂಡಿದ್ದ. ‘ಲೆ ಗ್ರೆಲೆ’ ಎಂಬ ಅಡ್ಡಹೆಸರಿನಿಂದ ಕುಖ್ಯಾತನಾಗಿದ್ದ ಸರಣಿ ಹಂತಕ ತಾನೇ ಎಂದು ಈ ಸುಸೈಡ್ ನೋಟಿನಲ್ಲಿ ಹೇಳಿದ್ದಾನೆ. ಹತ್ಯೆ ನಡೆದ ಹಲವು ಕಡೆಗಳಲ್ಲಿ ದಕ್ಕಿದ ಪುರಾವೆಗಳಲ್ಲಿ ಲಭಿಸಿದ ಅಂಶಗಳಿಗೂ ವೆರೋವ್ನ ಡಿಎನ್ಎಗೂ ಹೋಲಿಕೆಯಿದೆ ಎಂದು ಅಭಿಯೋಜಕರು ದೃಢಪಡಿಸಿದ್ದಾರೆ. ಇನ್ನಷ್ಟು ಪರೀಕ್ಷೆ ನಡೆಸಲಾಗುತ್ತಿದೆ ಎಂದು ಫ್ರಾನ್ಸ್‌ನ ಮಾಧ್ಯಮಗಳು ವರದಿ ಮಾಡಿವೆ.

1986ರಲ್ಲಿ ಪ್ಯಾರಿಸ್‌ನ 11 ವರ್ಷದ ಬಾಲಕಿ ಸಿಸಿಲಿ ಬ್ಲಾಚ್ರ ಹತ್ಯೆಯಿಂದ ಸರಣಿ ಕೊಲೆ ಪ್ರಕರಣ ಆರಂಭಗೊಂಡಿತ್ತು. ಬಳಿಕ 19 ವರ್ಷದ ಜರ್ಮನ್ ಯುವತಿ ಕ್ಯಾರಿನ್ ಲೆರೋಯ್, 20 ವರ್ಷದ ಜರ್ಮನ್ ಮಹಿಳೆ ಇರ್ಮಗಾರ್ಡ್ ಮುಲ್ಲರ್, 38 ವರ್ಷದ ಗಿಲಿಸ್ ಪೊಲಿಟಿ ನಿಗೂಢ ರೀತಿಯಲ್ಲಿ ಹತ್ಯೆಯಾಗಿದ್ದರು. ಈ ಎಲ್ಲಾ ಹತ್ಯೆಗಳನ್ನು ತಾನೇ ಮಾಡಿರುವುದಾಗಿಯೂ, ಮಾನಸಿಕ ಉದ್ವೇಗದ ಸ್ಥಿತಿ ಇದಕ್ಕೆ ಕಾರಣವಾಗಿತ್ತು ಎಂದು ವೆರೋವ್ ತಪ್ಪೊಪ್ಪಿಗೆಯಲ್ಲಿ ಉಲ್ಲೇಖಿಸಿದ್ದಾನೆ. 

ಸೇವೆಯಿಂದ ನಿವೃತ್ತನಾದ ಬಳಿಕವೂ, ಸರಣಿ ಹತ್ಯೆ ಪ್ರಕರಣದ ತನಿಖೆಯಲ್ಲಿ ಸಹಕರಿಸುವಂತೆ ಅಧಿಕಾರಿಗಳ ನಿರಂತರ ಒತ್ತಡದಿಂದ ಬೇಸತ್ತಿರುವುದಾಗಿ ಪತ್ರದಲ್ಲಿ ತಿಳಿಸಿದ್ದಾನೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News