×
Ad

ವೈಜ್ಞಾನಿಕ ತ್ಯಾಜ್ಯ ವಿಲೇವಾರಿ ಅರಿವು ಇರಲಿ, ಅನಗತ್ಯ ಪ್ರತಿರೋಧ ಸಲ್ಲದು: ಡಾ. ಕುಮಾರ್

Update: 2021-10-01 22:10 IST

ಮಂಗಳೂರು, ಅ.1: ಪ್ಲಾಸ್ಟಿಕ್ ತ್ಯಾಜ್ಯದ ವೈಜ್ಞಾನಿಕ ಮರುಬಳಕೆ ನಿಟ್ಟಿನಲ್ಲಿ ಗ್ರಾಪಂಗಳ ಜನಪ್ರತಿನಿಧಿಗಳು ಹೆಚ್ಚಿನ ಅರಿವು ಹೊಂದಿ, ವಿಶೇಷ ಮುತುವರ್ಜಿ ವಹಿಸಬೇಕು. ಈ ಕುರಿತು ಅನಗತ್ಯ ಪ್ರತಿರೋಧ ಸಲ್ಲದು ಎಂದು ದ.ಕ. ಜಿಪಂ ಸಿಇಒ ಡಾ.ಕುಮಾರ್ ತಿಳಿಸಿದ್ದಾರೆ.

ಬಂಟ್ವಾಳ ತಾಲೂಕಿನ ಕಾವಳಮೂಡೂರು ಗ್ರಾಪಂ ಸಭಾಂಗಣದಲ್ಲಿ ಜಿಪಂ, ಸ್ವಚ್ಛ ಭಾರತ ಮಿಷನ್ (ಗ್ರಾಮೀಣ), ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ, ಬಂಟ್ವಾಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದಿಂದ ಸ್ವಾತಂತ್ರೋತ್ಸವದ ಅಮೃತ ಮಹೋತ್ಸವದ ಹಿನ್ನೆಲೆ ಯಲ್ಲಿ ಸ್ವಚ್ಛ ಭಾರತ ಅಭಿಯಾನದ ಅಂಗವಾಗಿ ಪ್ಲಾಸ್ಟಿಕ್ ಬಳಕೆ ವಿರುದ್ಧ ಜಾಗೃತಿ ಅಭಿಯಾನ ಉದ್ಘಾಟಿಸಿ ಅವರು ಮಾತನಾಡಿದರು.

ತ್ಯಾಜ್ಯ ವಿಲೇವಾರಿಯೇ ದೊಡ್ಡ ಸಮಸ್ಯೆಯಾಗಿದೆ. ಜನರು ತಮ್ಮ ಹಕ್ಕುಗಳನ್ನು ಕೇಳುವ ಸಂದರ್ಭ ಕರ್ತವ್ಯವನ್ನು ಮರೆಯಬಾರದು. ಮೂಲದಲ್ಲೇ ಹಸಿ, ಒಣ ಕಸವನ್ನು ವಿಂಗಡಿಸಿ ನೀಡಿದರೆ, ಪ್ಲಾಸ್ಟಿಕ್‌ನಂಥ ಮರುಬಳಕೆಯುಕ್ತ ತ್ಯಾಜ್ಯವನ್ನು ವಿಲೇವಾರಿ ಮಾಡಲು ಸುಲಭವಾಗು ತ್ತದೆ. ಇಂತಹ ಸಂದರ್ಭ ವೈಜ್ಞಾನಿಕವಾಗಿ ಸಂಸ್ಕರಣೆಯನ್ನು ಮಾಡಲಾಗುತ್ತಿದ್ದು, ಈ ಕುರಿತು ಜನರು ತಪ್ಪುಕಲ್ಪನೆ ಹೊಂದಿದ್ದರೆ, ಜನಪ್ರತಿನಿಧಿ ಗಳು ಅವುಗಳ ನಿವಾರಣೆಗೆ ಪ್ರಯತ್ನಿಸಬೇಕು. ಸಾಮಾಜಿಕ ಹೊಣೆಗಾರಿಕೆಯ ನಿಟ್ಟಿನಲ್ಲಿ ಪತ್ರಕರ್ತರ ಸಂಘ ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಹಲವಾರು ಕಾರ್ಯಕ್ರಮಗಳನ್ನು ಸಂಘಟಿಸಿ ಗ್ರಾಮೀಣ ಜನತೆಯ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದೆ ಎಂದರು.

ಗ್ರಾಪಂ ಅಧ್ಯಕ್ಷೆ ಜಯಲಕ್ಷ್ಮಿ ಅಧ್ಯಕ್ಷತೆ ವಹಿಸಿದ್ದರು. ಬಂಟ್ವಾಳ ತಾಲೂಕು ಇಒ ರಾಜಣ್ಣ, ತಾಪಂ ಸಹಾಯಕ ನಿರ್ದೇಶಕ ದಿನೇಶ್, ಗ್ರಾಪಂ ಉಪಾಧ್ಯಕ್ಷ ಅಜಿತ್, ಜಿಲ್ಲಾ ವಾರ್ತಾಧಿಕಾರಿ ರವಿರಾಜ್ ಎಚ್.ಜಿ., ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಪ್ರಶಾಂತ್ ಪುಂಜಾಲಕಟ್ಟೆ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ಅಡ್ಕಸ್ಥಳ ಉಪಸ್ಥಿತರಿದ್ದರು.

ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಗ್ರಾಪಂ ಪಿಡಿಒ ರಚನ್ ಕುಮಾರ್ ಸ್ವಾಗತಿಸಿದರು. ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷ ಸಂದೀಪ್ ಸಾಲ್ಯಾನ್ ವಂದಿಸಿದರು. ಪ್ರಧಾನ ಕಾರ್ಯದರ್ಶಿ ಮೌನೇಶ್ ವಿಶ್ವಕರ್ಮ ಕಾರ್ಯಕ್ರಮ ನಿರೂಪಿಸಿದರು.

ಜನಜಾಗೃತಿ: ಕಾರ್ಯಕ್ರಮಕ್ಕೆ ಪೂರ್ವಭಾವಿಯಾಗಿ ಗ್ರಾಪಂ ವ್ಯಾಪ್ತಿಯ ಎನ್.ಸಿ.ರೋಡ್ ಜಂಕ್ಷನ್‌ನಿಂದ ಗ್ರಾಪಂ ಕಚೇರಿ ವಠಾರದವರೆಗೆ ಸ್ವಚ್ಛತಾ ಜಾಗೃತಿ ಜಾಥಾ ನಡೆಸಲಾಯಿತು. ಬಳಿಕ ಪತ್ರಕರ್ತರ ಸೇರುವಿಕೆಯಲ್ಲಿ ಜಾಗೃತಿ ಹಾಡು ಹಾಗೂ ರೂಪಕ ಪ್ರದರ್ಶಿಸಲಾಯಿತು.

26 ಕೆ.ಜಿ. ಪ್ಲಾಸ್ಟಿಕ್ ಸಂಗ್ರಹ: ಕಾವಳಮೂಡೂರು ಗ್ರಾಪಂ ಸಭಾಂಗಣದಲ್ಲಿ ಜಿಪಂ ಸ್ವಚ್ಛ ಭಾರತ್ ಮಿಷನ್ (ಗ್ರಾಮೀಣ), ಕಾವಳಮೂಡೂರು ಗ್ರಾಪಂ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ, ಬಂಟ್ವಾಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಯೋಗದಲ್ಲಿ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ನಡೆದ ಸ್ವಚ್ಛತಾ ಸೇವಾ ಕಾರ್ಯಕ್ರಮದಲ್ಲಿ ಪ್ಲಾಸ್ಟಿಕ್ ಸಂಗ್ರಹಿಸಿದವರಿಗೆ ಅಕ್ಕಿ ಬಹುಮಾನ ನೀಡುವುದಾಗಿ ಘೋಷಿಸಲಾಗಿತ್ತು. ಅದರಂತೆ ಒಟ್ಟು 43 ಗ್ರಾಮಸ್ಥರು 26 ಕೆ.ಜಿ.ಪ್ಲಾಸ್ಟಿಕ್ ಸಂಗ್ರಹಿಸಿ ಕಾರ್ಯಕ್ರಮದ ಸಂದರ್ಭ ನೀಡಿದರು.

260 ಕೆಜಿ ಅಕ್ಕಿ ವಿತರಣೆ: ಅಂಗನವಾಡಿ, ಆಶಾ ಕಾರ್ಯಕರ್ತೆಯರ ಸಹಿತ ಪಂಚಾಯಿತಿ ಸದಸ್ಯರೂ ಈ ಅಭಿಯಾನದಲ್ಲಿ ಉತ್ಸಾಹದಿಂದ ಪಾಲ್ಗೊಂಡರು. ಅವರಿಗೆ ಬಂಟ್ವಾಳ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಪ್ರಶಾಂತ್ ಪುಂಜಾಲಕಟ್ಟೆ ನೇತೃತ್ವದಲ್ಲಿ 260 ಕೆಜಿ ಅಕ್ಕಿ ವಿತರಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News