ಇಥಿಯೋಪಿಯಾದ ಟಿಗ್ರೆಯಲ್ಲಿ ಅಸಾಮಾನ್ಯ ಅಪೌಷ್ಟಿಕತೆಯ ಸಮಸ್ಯೆ : ವಿಶ್ವಸಂಸ್ಥೆ ಎಚ್ಚರಿಕೆ

Update: 2021-10-01 16:47 GMT

ವಿಶ್ವಸಂಸ್ಥೆ, ಅ.1: ಯುದ್ಧದಿಂದ ಜರ್ಜರಿತಗೊಂಡಿರುವ ಇಥಿಯೋಪಿಯಾದ ಟಿಗ್ರೆ ಪ್ರಾಂತ್ಯದ ಗರ್ಭಿಣಿ ಹಾಗೂ ಹಾಲೂಡಿಸುವ ಮಹಿಳೆಯರಲ್ಲಿ ಹಿಂದೆಂದೂ ಕಂಡಿರದ ರೀತಿಯ ಅಸಾಮಾನ್ಯ ಅಪೌಷ್ಟಿಕತೆಯ ಸಮಸ್ಯೆಯಿದೆ ಎಂದು ವಿಶ್ವಸಂಸ್ಥೆಯ ವರದಿಯಲ್ಲಿ ಎಚ್ಚರಿಸಲಾಗಿದೆ.

ವಿಶ್ವಸಂಸ್ಥೆಯ ಹಲವು ಹಿರಿಯ ಅಧಿಕಾರಿಗಳನ್ನು ದೇಶದಿಂದ ಹೊರಹೋಗುವಂತೆ ಇಥಿಯೋಪಿಯಾ ಸರಕಾರ ಆದೇಶಿಸಿದ ಕೆಲ ಗಂಟೆಗಳ ಬಳಿಕ ಈ ವರದಿ ಪ್ರಕಟವಾಗಿದೆ. ಇಥಿಯೋಪಿಯಾದ ಉತ್ತರದಲ್ಲಿ ಘರ್ಷಣೆ ಭುಗಿಲೆದ್ದ ಸುಮಾರು 11 ತಿಂಗಳ ಬಳಿಕ ಸಾಮೂಹಿಕ ಉಪವಾಸ ಪ್ರಕರಣ ಹೆಚ್ಚಿರುವ ಜೊತೆಗೆ ಮಕ್ಕಳಲ್ಲಿ ಅಪೌಷ್ಟಿಕತೆಯ ಸಮಸ್ಯೆಯೂ ಆತಂಕಕಾರಿ ರೀತಿಯಲ್ಲಿ ಹೆಚ್ಚುತ್ತಿದೆ. 

ಅಧ್ಯಯನದ ಅವಧಿಯಲ್ಲಿ ಸಮೀಕ್ಷೆಗೆ ಒಳಪಡಿಸಲಾದ 15,000 ಗರ್ಭಿಣಿ ಹಾಗೂ ಹಾಲೂಡಿಸುವ ಮಹಿಳೆಯರಲ್ಲಿ 12,000ಕ್ಕೂ ಅಧಿಕ ಮಹಿಳೆಯರು ಅಥವಾ ಸುಮಾರು ಶೇ. 79 ರಷ್ಟು ಮಂದಿ ತೀವ್ರ ಅಪೌಷ್ಟಿಕತೆಯಿಂದ ಬಳಲುತ್ತಿದ್ದರು. 5 ವರ್ಷದೊಳಗಿನ ಮಕ್ಕಳಲ್ಲಿ ಸಾಧಾರಣ ಅಪೌಷ್ಟಿಕತೆಯ ಪ್ರಮಾಣ ಜಾಗತಿಕ ಅಪಾಯ ಮಟ್ಟವಾದ ಶೇ.15ರಷ್ಟು ಮೀರಿ 18%ಕ್ಕೆ ಏರಿದ್ದರೆ, ತೀವ್ರ ಅಪೌಷ್ಟಿಕತೆಯಿಂದ ಬಳಲುವ ಮಕ್ಕಳ ಪ್ರಮಾಣವೂ ಜಾಗತಿಕ ಅಪಾಯ ಮಟ್ಟ ಶೇ.2ರಷ್ಟು ಮೀರಿ 2.4%ಕ್ಕೆ ತಲುಪಿದೆ ಎಂದು ವಿಶ್ವಸಂಸ್ಥೆಯ ಸಮನ್ವಯ ಕಾರ್ಯಾಲಯ(ಒ ಸಿ ಎಚ್ ಎ) ಗುರುವಾರ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದೆ.
 
ವಿಶ್ವಸಂಸ್ಥೆಯ ಅಧಿಕಾರಿಗಳಿಗೆ ದೇಶದಿಂದ ಹೊರಹೋಗುವಂತೆ ಆದೇಶಿಸಿದ ಇಥಿಯೋಪಿಯಾ ಸರಕಾರದ ಕ್ರಮವನ್ನು ಶುಕ್ರವಾರ ವಿಶ್ವಸಂಸ್ಥೆ ಖಂಡಿಸಿದ್ದು, ಇದರಿಂದ ಟಿಗ್ರೆ ವಲಯದಲ್ಲಿ ತುರ್ತು ಮಾನವೀಯ ನೆರವಿನ ಅಗತ್ಯವಿರುವ ಮಿಲಿಯಾಂತರ ಜನರಿಗೆ ಸಮಸ್ಯೆಯಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದೆ. ಮಾನವೀಯ ನೆರವು ಉಪಕ್ರಮ ಮುಂದುವರಿಯುವುದು ಅತ್ಯಗತ್ಯವಾಗಿದೆ ಮತ್ತು ಅದು ಮುಂದುವರಿಯಲಿದೆ . ಇದುವರೆಗೆ ನಮ್ಮ ಕಾರ್ಯನಿರ್ವಹಣೆಯನ್ನು ತಡೆಯುವ ಸೂಚನೆ ಸರಕಾರದಿಂದ ಬಂದಿಲ್ಲ ಎಂದು ವಿಶ್ವಸಂಸ್ಥೆಯ ಮಾನವೀಯ ವ್ಯವಹಾರಗಳ ಕಾರ್ಯಾಲಯದ ವಕ್ತಾರ ಜೆನ್ಸ್ ಲ್ಯಾರ್ಕೆ ಹೇಳಿದ್ದಾರೆ.
 
ವಿಶ್ವಸಂಸ್ಥೆಯ ಮಾನವೀಯ ನೆರವು ಒದಗಿಸುವ ಕೆಲವು ಸಿಬಂದಿಗಳು ಟಿಗ್ರೇಯ ಸರಕಾರಿ ವಿರೋಧಿ ಪಡೆಗಳ ಪರವಾಗಿದ್ದಾರೆ ಮತ್ತು ಅವರಿಗೆ ಶಸ್ತ್ರಾಸ್ತ್ರಗಳನ್ನೂ ಪೂರೈಸುತ್ತಿದ್ದಾರೆ ಎಂದು ಇಥಿಯೋಪಿಯಾದ ಅಧಿಕಾರಿಗಳು ಪ್ರತಿಕ್ರಿಯಿಸಿದ್ದಾರೆ. ದೇಶದಲ್ಲಿ ನಡೆಯುತ್ತಿರುವ ಯುದ್ಧದ ಬಗ್ಗೆ ತಪ್ಪು ಮಾಹಿತಿ ಪ್ರಸಾರ ಮಾಡುತ್ತಿದ್ದ ಆರೋಪದಲ್ಲಿ 2 ಪ್ರಮುಖ ಅಂತರಾಷ್ಟ್ರೀಯ ನೆರವು ಸಂಘಟನೆಗಳಾದ ‘ಡಾಕ್ಟರ್ಸ್ ವಿತೌಟ್ ಬಾರ್ಡರ್’ ಮತ್ತು ನಾರ್ವೆಜಿಯನ್ ರೆಫ್ಯೂಜಿ ಕಮಿಟಿ’ ದೇಶದಲ್ಲಿ ಕಾರ್ಯನಿರ್ವಹಿಸುವುದನ್ನು ನಿಷೇಧಿಸಿ ಸರಕಾರ ಆದೇಶಿಸಿತ್ತು.

ವಿಶ್ವಸಂಸ್ಥೆ ಅಧಿಕಾರಿಗಳ ಉಚ್ಚಾಟನೆ
   
ದೇಶದ ಆಂತರಿಕ ವ್ಯವಹಾರಗಳಲ್ಲಿ ಹಸ್ತಕ್ಷೇಪ ಮಾಡುತ್ತಿದ್ದ ಹಿನ್ನೆಲೆಯಲ್ಲಿ ವಿಶ್ವಸಂಸ್ಥೆಯ 7 ಹಿರಿಯ ಅಧಿಕಾರಿಗಳನ್ನು ದೇಶ ಬಿಟ್ಟು ತೆರಳುವಂತೆ ಸೂಚಿಸಲಾಗಿದೆ ಎಂದು ಇಥಿಯೋಪಿಯಾ ಸರಕಾರ ಗುರುವಾರ ಘೋಷಿಸಿದೆ. ವಿಶ್ವಸಂಸ್ಥೆಯ ಮಕ್ಕಳ ಸಂಘಟನೆ( ಯುನಿಸೆಫ್) ಮತ್ತು ಮಾನವೀಯ ನೆರವಿನ ಸಮನ್ವಯ ಕಾರ್ಯಾಲಯದ ಸ್ಥಳೀಯ ಮುಖ್ಯಸ್ಥರು ಇದರಲ್ಲಿ ಒಳಗೊಂಡಿದ್ದಾರೆ.
72 ಗಂಟೆಯೊಳಗೆ ದೇಶದಿಂದ ಹೊರತೆರಳುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಸರಕಾರಿ ಮೂಲಗಳು ಹೇಳಿವೆ. ಈ ನಿರ್ಧಾರದಿಂದ ಆಘಾತವಾಗಿದೆ ಎಂದು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆ್ಯಂಟೋನಿಯೊ ಗುಟೆರಸ್ ಹೇಳಿದ್ದು, ಈ ವಿಷಯದ ಬಗ್ಗೆ ಚರ್ಚಿಸಲು ವಿಶ್ವಸಂಸ್ಥೆ ಭದ್ರತಾ ಸಮಿತಿಯ ತುರ್ತು ಸಭೆ ಶುಕ್ರವಾರ ನಡೆಯಲಿದೆ ಎಂದಿದ್ದಾರೆ.
=====

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News