×
Ad

ಮಂಗಳೂರು; ಅಸ್ಸಾಂ ಮೂಲದ ಯುವಕನ ಕೊಲೆ ಪ್ರಕರಣ: ಒಡಿಶಾ ಮೂಲದ ಆರೋಪಿ ಸೆರೆ

Update: 2021-10-01 22:47 IST

ಮಂಗಳೂರು, ಅ.1: ನಗರದ ಬಂದರು ರೈಲ್ವೆ ಗೂಡ್ಸ್ ಶೆಡ್ ಯಾರ್ಡ್‌ನಲ್ಲಿ ಈ ವರ್ಷದ ಫೆ.18ರಂದು ನಡೆದ ಅಸ್ಸಾಂನ ಮೈನುಲ್ ಹಕ್ ಬಾರ್ಬುಯ್ಯಾ ಕೊಲೆ ಪ್ರಕರಣದ ಆರೋಪಿಯನ್ನು ರೈಲ್ವೆ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.

ಒಡಿಶಾ ಮೂಲದ ಪ್ರದೀಪ್ ಲಕಾರ ಬಂಧಿತ ಆರೋಪಿ ಎಂದು ತಿಳಿದುಬಂದಿದೆ.

ಮೃತ ಮೈನುಲ್ ಹಕ್ ಸುಮಾರು 10 ವರ್ಷಗಳಿಂದ ಮಂಗಳೂರು ಬಂದರಿನಲ್ಲಿ ಕೂಲಿ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದರು. ಕುಡಿತದ ಚಟ ಹೊಂದಿದ್ದ ಮೈನುಲ್ ಹಕ್ ಗೆಳೆಯರೊಂದಿಗೆ ಸೇರಿ ಜಗಳ ಮಾಡುತ್ತಿದ್ದ ಎನ್ನಲಾಗಿದೆ. ಆಗಸ್ಟ್‌ನಲ್ಲಿ ಆರೋಪಿ ಪ್ರದೀಪ್ ಲಕಾರ ಮದ್ಯ ಸೇವನೆ ಮಾಡಿ ಮಲಗಿದ್ದಾಗ ಮೈನುಲ್ ಹಕ್ ಆತನ ಮೊಬೈಲ್ ಪೋನ್ ಕದ್ದು ಅದನ್ನು ವಾಪಸ್ ನೀಡಬೇಕಾದರೆ 500 ರೂ. ನೀಡಬೇಕೆಂದು ಹೇಳಿ ಜಗಳ ಮಾಡುತ್ತಿದ್ದ ಎನ್ನಲಾಗಿದ್ದು, ಇದೇ ದ್ವೇಷದಿಂದ ಪ್ರದೀಪ್ ಮೈನುಲ್ ಹಕ್‌ನನ್ನು ಕೊಲೆ ಮಾಡಿರುವುದು ತನಿಖೆಯಿಂದ ಗೊತ್ತಾಗಿದೆ. ಇದರಲ್ಲಿ ಇತರ ಆರೋಪಿಗಳಿದ್ದಾರೆಯೇ ಎಂಬುದರ ತನಿಖೆ ನಡೆಯುತ್ತಿದೆ. ಆರೋಪಿ ಪ್ರದೀಪ್‌ನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ ಎಂದು ರೈಲ್ವೆ ಪೊಲೀಸರು ತಿಳಿಸಿದ್ದಾರೆ.

ಆರೋಪಿಯ ಪತ್ತೆಗೆ ರೈಲ್ವೆ ಪೊಲೀಸ್ ಅಧೀಕ್ಷಕಿ ಸಿರಿ ಗೌರಿ, ಪೊಲೀಸ್ ಉಪಾಧೀಕ್ಷಕ ಡಿ.ಅಶೋಕ್ ಅವರ ಮಾರ್ಗದರ್ಶನದಲ್ಲಿ ವಿಶೇಷ ತಂಡ ರಚಿಸಲಾಗಿತ್ತು. ಮಂಗಳೂರು ರೈಳ್ವೆ ಪೊಲೀಸ್ ಠಾಣೆಯ ನಿರೀಕ್ಷಕ ಮೋಹನ್ ಕೊಟ್ಟಾರಿ ನೇತೃತ್ವದ ತಂಡದಲ್ಲಿ ಕಾರ್ಯಾಚರಣೆ ನಡೆದಿದೆ. ರೈಲ್ವೆ ಎಡಿಜಿಪಿ ಭಾಸ್ಕರ್ ರಾವ್, ರೈಲ್ವೆ ಪೊಲೀಸ್ ಅಧೀಕ್ಷಕಿ ಸಿರಿಗೌರಿ ಅವರು ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಯ ಕಾರ್ಯಾಚರಣೆಯನ್ನು ಶ್ಲಾಘಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News