"ದುರ್ಬಲರ ರಕ್ಷಣೆ ನಮ್ಮ ಕರ್ತವ್ಯವಾಗಿದೆ": ಕಾಶ್ಮೀರ ಹೇಳಿಕೆಗಳಿಗೆ ಭಾರತದ ತಿರಸ್ಕಾರಕ್ಕೆ ವಿಶ್ವಸಂಸ್ಥೆ ಪ್ರತಿಕ್ರಿಯೆ

Update: 2021-10-01 17:30 GMT

ಹೊಸದಿಲ್ಲಿ,ಅ.1: ಕಾಶ್ಮೀರದಲ್ಲಿ ನಿರ್ಬಂಧಕ ಕ್ರಮಗಳು ಮಾನವ ಹಕ್ಕುಗಳ ಉಲ್ಲಂಘನೆಯಾಗಿ ಪರಿಣಮಿಸಬಹುದು ಮತ್ತು ಇನ್ನಷ್ಟು ಉದ್ವಿಗ್ನತೆ ಹಾಗೂ ಅತೃಪ್ತಿಯನ್ನುಂಟು ಮಾಡಬಹುದು ಎಂಬ ವಿಶ್ವಸಂಸ್ಥೆ ಮಾನವ ಹಕ್ಕುಗಳ ಮುಖ್ಯಸ್ಥರ ಹೇಳಿಕೆಗೆ ಭಾರತದ ತಿರಸ್ಕಾರಕ್ಕೆ ಪ್ರತಿಕ್ರಿಯಿಸಿರುವ ಅವರ ಕಚೇರಿಯು ದುರ್ಬಲರ ರಕ್ಷಣೆ ತನ್ನ ಕರ್ತವ್ಯವಾಗಿದೆ ಎಂದು ಹೇಳಿದೆ. ಕಾಶ್ಮೀರದಲ್ಲಿ ಅಕ್ರಮ ಚಟುವಟಿಕೆಗಳಿಗೆ ತಡೆ ಕಾಯ್ದೆ (ಯುಎಪಿಎ)ಯ ಬಳಕೆ ಮತ್ತು ಪದೇ ಪದೇ ಸಂವಹನ ಸೇವೆಯ ಸ್ಥಗಿತ ಕಳವಳಕಾರಿಯಾಗಿವೆ ಎಂದು ಮಾನವ ಹಕ್ಕುಗಳಿಗಾಗಿ ವಿಶ್ವಸಂಸ್ಥೆಯ ರಾಯಭಾರಿ ಮಿಷೆಲ್ ಬ್ಯಾಚಲೆಟ್ ಅವರು ಬಣ್ಣಿಸಿದ್ದರು.

ಗುರುವಾರ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಬ್ಯಾಚಲೆಟ್ ಅವರ ನ್ಯೂಯಾರ್ಕ್ ಕಚೇರಿಯ ನಿರ್ದೇಶಕ ಕ್ರೇಗ್ ಮೊಖಿಬೆರ್ ಅವರು,‘ನಾವೆಂದೂ ಕಾಶ್ಮೀರ ಕುರಿತಂತೆ ಭಾರತ ಅಥವಾ ಪಾಕಿಸ್ತಾನವನ್ನು ಬೆಂಬಲಿಸುವುದಿಲ್ಲ. ಆದರೆ ದುರ್ಬಲರ ರಕ್ಷಣೆ ಮತ್ತು ಸಂತ್ರಸ್ತರ ಅಹವಾಲುಗಳನ್ನು ಆಲಿಸುವುದು ನಮ್ಮ ಕರ್ತವ್ಯವಾಗಿದೆ ’ಎಂದು ಹೇಳಿದರು. ಬ್ಯಾಚಲೆಟ್ ಅವರ ಹೇಳಿಕೆಗಳು ಅನಗತ್ಯವಾಗಿದ್ದು,ವಾಸ್ತವ ಸ್ಥಿತಿಯನ್ನು ಪ್ರತಿಫಲಿಸುವುದಿಲ್ಲ ಎಂದು ಭಾರತವು ಇತ್ತೀಚಿಗೆ ಹೇಳಿತ್ತು.
‘ವಿಶ್ವಸಂಸ್ಥೆಯ ವಿಕಾಸದೊಂದಿಗೆ ಸ್ಥಾನ ಕಳೆದುಕೊಂಡಿರುವ ಸಾರ್ವಭೌಮತೆಯ ಹಳೆಯ ಕಲ್ಪನೆಯೊಂದಿದೆ. ನಮ್ಮ ಗಡಿಗಳಲ್ಲಿ ಸಂಭವಿಸುವ ಏನೇ ಆದರೂ ಅದು ನಮ್ಮ ಸರಕಾರಕ್ಕೆ ಬಿಟ್ಟಿದ್ದು ಮತ್ತು ಅದರಲ್ಲಿ ಬೇರೆ ಯಾರೂ ಮೂಗು ತೂರಿಸುವಂತಿಲ್ಲ ಎನ್ನುವುದು ಈ ಹಳೆಯ ಕಲ್ಪನೆಯಾಗಿದೆ. ವಿಶ್ವಸಂಸ್ಥೆಯ ಸನದು ಅದರ ಸದಸ್ಯತ್ವ ಹೊಂದಿರುವ ಪ್ರತಿಯೊಂದೂ ದೇಶವನ್ನು ಬದ್ಧ ಒಪ್ಪಂದ,ಬದ್ಧ ಕಾನೂನಿಗೆ ಒಳಪಡಿಸಿದೆ. ಅದು ಎಲ್ಲ ಸದಸ್ಯರಾಷ್ಟ್ರಗಳಿಗೆ ಮಾನವ ಹಕ್ಕುಗಳನ್ನು ಅಂತರರಾಷ್ಟ್ರೀಯಗೊಳಿಸಿದೆ ಎಂದು ಹೇಳಿದ ಮೊಖಿಬೆರ್,ಅದು ಸರಕಾರದ ಹೊಣೆಗಾರಿಕೆಯಾಗಿದೆ. ಸಾರ್ವಭೌಮತೆಯನ್ನು ಪ್ರತಿಪಾದಿಸಲು ದೇಶಾದ್ಯಂತ ನಿಮ್ಮ ಜನರಿಗೆ ಸ್ವಾತಂತ್ರ್ಯ ದೊರಕಿರುವುದನ್ನು ನೀವು ಖಚಿತಪಡಿಸಿಕೊಳ್ಳಬೇಕಾಗುತ್ತದೆ’ ಎಂದರು.
ಭಾರತ ಮತ್ತು ಪಾಕಿಸ್ತಾನಗಳ ನಡುವಿನ ಉದ್ವಿಗ್ನತೆಗಳು ಮತ್ತು ಅಂತರರಾಷ್ಟ್ರೀಯ ಸಮುದಾಯದಲ್ಲಿ ಪ್ರತಿಯೊಂದೂ ರಾಷ್ಟ್ರವು ಪಾತ್ರವನ್ನು ಹೊಂದಿರುವುದರಿಂದ ಕಾಶ್ಮೀರವು ಕಠಿಣ ವಿಷಯವಾಗಿದೆ ಎಂದು ಅವರು ನುಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News