×
Ad

ಉನ್ನತ ಅಧಿಕಾರಿಗಳು, ಪೊಲೀಸ್ ಅಧಿಕಾರಿಗಳ ವಿರುದ್ಧ ಸುಪ್ರೀಂ ಕೋರ್ಟ್ ಗರಂ

Update: 2021-10-02 10:30 IST

ಹೊಸದಿಲ್ಲಿ, ಅ.2: ತಮ್ಮ ರಾಜಕೀಯ ಮುಖಂಡರ ಕಾನೂನುಬಾಹಿರ ಆದೇಶಗಳನ್ನು ಕಾರ್ಯಗತಗೊಳಿಸುವ ಸಲುವಾಗಿ ಉದ್ದೇಶಪೂರ್ವಕವಾಗಿ ಆಡಳಿತ ಪಕ್ಷದ ಕೈಗೊಂಬೆಯಾಗಿರುವ ಉನ್ನತ ಅಧಿಕಾರಿಗಳು ಮತ್ತು ಹಿರಿಯ ಪೊಲೀಸ್ ಅಧಿಕಾರಿಗಳ ವಿರುದ್ಧ ಸುಪ್ರೀಂ ಕೋರ್ಟ್ ಕೆಂಗಣ್ಣು ಬೀರಿದೆ. ನಾಗರಿಕರ ದೂರುಗಳ ಪರಿಶೀಲನೆಗಾಗಿ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳ ನೇತೃತ್ವದ ಸ್ಥಾಯಿ ಸಮಿತಿಗಳನ್ನು ಎಲ್ಲ ರಾಜ್ಯಗಳಲ್ಲೂ ರಚಿಸುವ ಬಗ್ಗೆ ಗಂಭೀರ ಚಿಂತನೆ ನಡೆಸಬೇಕಾಗಿದೆ ಎಂದು ಎಚ್ಚರಿಕೆ ನೀಡಿದೆ.

"ದೇಶದಲ್ಲಿ ಉನ್ನತ ಅಧಿಕಾರಿಗಳು ಅದರಲ್ಲೂ ಮುಖ್ಯವಾಗಿ ಪೊಲೀಸ್ ಅಧಿಕಾರಿಗಳ ನಡವಳಿಕೆ ಬಗ್ಗೆ ತೀವ್ರ ಅಸಮಾಧಾನ ಇದೆ. ಒಂದು ಹಂತದಲ್ಲಿ ನಾವು ಉನ್ನತ ಅಧಿಕಾರಿಗಳು ಮತ್ತು ಪೊಲೀಸ್ ಅಧಿಕಾರಿಗಳ ದೌರ್ಜನ್ಯಗಳ ಬಗ್ಗೆ ಮತ್ತು ಅವರ ವಿರುದ್ಧದ ದೂರುಗಳ ಬಗ್ಗೆ ಪರಿಶೀಲಿಸಲು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳ ನೇತೃತ್ವದ ಸಮಿತಿಗಳನ್ನು ರಚಿಸುವ ಬಗ್ಗೆಯೂ ಚಿಂತನೆ ನಡೆಸಿದ್ದೇವೆ" ಎಂದು ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ ನೇತೃತ್ವದ ಪೀಠ ಹೇಳಿದೆ.

ದೇಶದ್ರೋಹ ಮತ್ತು ಅಧಿಕ ಸಂಪತ್ತು ಸಂಗ್ರಹಿಸಿದ ಆರೋಪಗಳು ಸೇರಿದಂತೆ ಮೂರು ಪ್ರಕರಣಗಳಲ್ಲಿ ಬಂಧನ ಭೀತಿ ಎದುರಿಸುತ್ತಿರುವ ಛತ್ತೀಸ್‌ಗಢದ ಎಡಿಜಿಪಿ ಗುರ್ಜೀಂದರ್ ಪಾಲ್ ಸಿಂಗ್, ಈ ಪ್ರಕರಣಗಳಲ್ಲಿ ರಕ್ಷಣೆ ನೀಡುವಂತೆ ಕೋರಿ ಸಲ್ಲಿಸಿರುವ ಮನವಿ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್ ಈ ಅಭಿಪ್ರಾಯ ವ್ಯಕ್ತಪಡಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News