ಜೈಲಿನಲ್ಲಿರುವ ಪಿಎಫ್‌ಐ ಕಾರ್ಯಕರ್ತರಿಬ್ಬರನ್ನು ಭೇಟಿಯಾಗಲು ಬಂದ ಕೇರಳದ ಮೂವರು ಮಹಿಳೆಯರನ್ನು ಬಂಧಿಸಿದ ಉ.ಪ್ರ ಪೊಲೀಸರು

Update: 2021-10-02 08:53 GMT

ಲಕ್ನೋ: ಬಂಧಿತ ಇಬ್ಬರು ಪಿಎಫ್‍ಐ ಸದಸ್ಯರನ್ನು ಭೇಟಿಯಾಗಲೆಂದು ಕೇರಳದಿಂದ ಬಂದ ಅವರ ಕುಟುಂಬದ ಮೂವರು ಮಹಿಳೆಯರು ನಕಲಿ ಆರ್‍ಟಿ-ಪಿಸಿಆರ್ ವರದಿಗಳನ್ನು ನೀಡಿದ್ದಾರೆಂಬ ಆರೋಪದಡಿಯಲ್ಲಿ ಪೊಲೀಸರು ಲಕ್ನೋದಲ್ಲಿ ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.

ಬಂಧಿತ ಮಹಿಳೆಯರು  ಪಿಎಫ್‍ಐ ಸದಸ್ಯರಾದ ಫಿರೋಝ್ ಖಾನ್ ಹಾಗೂ ಅನ್ಸಾದ್ ಬದ್ರುದ್ದೀನ್ ಅವರ ಸಂಬಂಧಿಗಳಾಗಿದ್ದಾರೆ. ಹಿಂದುತ್ವ ಸಂಘಟನೆಗಳ ಕಾರ್ಯಕ್ರಮ ನಡೆಯುತ್ತಿದ್ದ ಸ್ಥಳದಲ್ಲಿ ಬಾಂಬ್ ಇರಿಸಿದ್ದರೆಂಬ ಆರೋಪದ ಮೇಲೆ ಇಬ್ಬರನ್ನೂ ಈ ವರ್ಷದ ಫೆಬ್ರವರಿಯಲ್ಲಿ ಬಂಧಿಸಲಾಗಿತ್ತು. ಅಂದಿನಿಂದ ಅವರು ಲಕ್ನೋ ಜಿಲ್ಲಾ ಕಾರಾಗೃಹದಲ್ಲಿದ್ದಾರೆ.

ಸೆಪ್ಟೆಂಬರ್ 26ರಂದು  ಕೇರಳದ ನಝೀಮಾ ಬದ್ರುದ್ದೀನ್, ಮುಹ್ಸಿನಾ, ಕುಂಞಲಿಮಾ ಹಾಗೂ ಸೌಜತ್ ಕೆ.ಸಿ ವಿರುದ್ಧ ಲಕ್ನೋದ ಗೊಸೈಗಂಜ್ ಠಾಣೆಯಲ್ಲಿ ಎಫ್‍ಐಆರ್  ಅನ್ನು ಐಪಿಸಿ ಸೆಕ್ಷನ್ 419, 420, 467 ಹಾಗೂ 461 ಅನ್ವಯ ದಾಖಲಿಸಲಾಗಿದೆ. ಮುಹ್ಸಿನಾ ಎಂಬಾಕೆ ಬದ್ರುದ್ದೀನ್‍ ರ ಪತ್ನಿಯಾಗಿದ್ದರೆ, ನಝೀಮಾ ಆಕೆಯ ಅತ್ತೆಯಾಗಿದ್ದು, ಸೌಜತ್ ಎಂಬವರು ಫಿರೋಝ್‍ ನ ಪತ್ನಿ ಮತ್ತು ಕುಂಞಲಿಮಾ ಸಂಬಂಧಿಯಾಗಿದ್ದಾರೆ.

ಎಫ್‍ಐಆರ್‍ನಲ್ಲಿ ನಾಲ್ಕು ಮಂದಿಯ ಹೆಸರಿದ್ದರೂ ಮೂವರನ್ನು ಬಂಧಿಸಲಾಗಿದೆ, ನಾಲ್ಕನೆಯವರಿಗಾಗಿ ಶೋಧ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ನಾಲ್ಕು ಮಂದಿಯೂ ಜೈಲರ್ ಗೆ ನಕಲಿ ಕೋವಿಡ್ ನೆಗೆಟಿವ್ ವರದಿ ಹಾಜರುಪಡಿಸಿದ್ದರು ಎಂದು ಜೈಲರ್ ದಾಖಲಿಸಿದ ದೂರಿನ ಆಧಾರದಲ್ಲಿ ಅವರನ್ನು ಬಂಧಿಸಲಾಗಿತ್ತು.

ಮೂಲಗಳ ಪ್ರಕಾರ ಅವರು ಗಾಝಿಯಾಬಾದ್‍ನ ಲ್ಯಾಬ್ ಒಂದರಲ್ಲಿ ಕೋವಿಡ್ ಪರೀಕ್ಷೆ ನಡೆಸಿದ್ದರು. ಜೈಲಿನ ಅಧಿಕಾರಿಗಳು ಈ ಲ್ಯಾಬ್ ಅನ್ನು ಸಂಪರ್ಕಿಸಿದಾಗ ವರದಿ ನೀಡಿದ್ದನ್ನು ಅದು ನಿರಾಕರಿಸಿತ್ತು. ಈ ಹಿನ್ನೆಲೆಯಲ್ಲಿ ಮಹಿಳೆಯರನ್ನು ಬಂಧಿಸಲಾಗಿದೆ.

ಲಕ್ನೋಗೆ ಬರುವಾಗ ಮುಹ್ಸಿನಾ ತನ್ನ ಎರಡು ವರ್ಷದ ಮಗುವನ್ನು ಕೇರಳದಲ್ಲಿ ಸಂಬಂಧಿಗಳ ಬಳಿ ಬಿಟ್ಟು ಬಂದಿದ್ದರು. ಅತ್ತ ಫಿರೋಝ್ ಖಾನ್ ಪತ್ನಿ ತನ್ನ ನಾಲ್ಕು ಮಂದಿ ಮಕ್ಕಳೊಂದಿಗೆ ಲಕ್ನೋಗೆ ಆಗಮಿಸಿದ್ದರು. ಕುಟುಂಬಗಳ ಜತೆಗೆ ಆಗಮಿಸಿದ್ದ ವಕೀಲ ಕೆ ಸಿ ನಾಸೀರ್ ಜತೆಗೆ ಮಕ್ಕಳನ್ನು  ಕಳುಹಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾಗಿ ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News