ಭಗತ್ ಸಿಂಗ್ ಗಲ್ಲು ತಪ್ಪಿದ್ದರೆ ಅಹಿಂಸಾತ್ಮಕ ಹೋರಾಟದ ಗೆಲುವು ಆಗುತ್ತಿತ್ತು: ಪ್ರೊ.ಪ್ರಶಾಂತ್ ನೀಲಾವರ
ಉಡುಪಿ, ಅ. 2: ಭಗತ್ ಸಿಂಗ್‌ಗೆ ನೇಣು ಶಿಕ್ಷೆ ವಿಧಿಸಿರುವುದು ಗಾಂಧೀಜಿಯ ಹೋರಾಟಕ್ಕೂ ಬಹಳ ಹಿನ್ನಡೆಯಾಗಿತ್ತು. ನೇಣು ಶಿಕ್ಷೆ ವಿಧಿಸಿದರೆ ಯುವಕರು ಹಿಂಸಾತ್ಮಕ ಹೋರಾಟಕ್ಕೆ ಹೆಚ್ಚು ಆಕರ್ಷಕರಾಗಬಹುದು ಎಂಬ ಆತಂಕ ಗಾಂಧೀಜಿಗೆ ಇತ್ತು. ಎಲ್ಲಿಯಾದರೂ ಈ ಶಿಕ್ಷೆ ತಪ್ಪಿದ್ದರೆ ಅಹಿಂಸಾ ಹೋರಾಟದ ಬಹಳ ದೊಡ್ಡ ಗೆಲುವು ಆಗುತ್ತಿತ್ತು ಎಂದು ಕೋಟ ಪಡುಕೆರೆ ಲಕ್ಷ್ಮೀ ಸೋಮ ಬಂಗೇರ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ.ಪ್ರಶಾಂತ್ ನೀಲಾವರ ಹೇಳಿದ್ದಾರೆ.
ಉಡುಪಿ ಎಂಜಿಎಂ ಕಾಲೇಜಿನ ಗಾಂಧಿ ಅಧ್ಯಯನ ಕೇಂದ್ರದ ವತಿಯಿಂದ ಶನಿವಾರ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಆಯೋಜಿಸಲಾದ ಗಾಂಧಿ ಜಯಂತಿ ಕಾರ್ಯಕ್ರಮದಲ್ಲಿ ಅವರು ವಿಶೇಷ ಉಪನ್ಯಾಸ ನೀಡಿದರು.
ಗಾಂಧೀಜಿಯು ಸ್ವಾತಂತ್ರ ಹೋರಾಟವನ್ನು ಜನಾಂದೋಲನವನ್ನಾಗಿ ರೂಪಿಸಿದರು. ಯಾವುದೇ ಆಧುನಿಕ ತಂತ್ರಜ್ಞಾನ, ಸಮೂಹ ಮಾಧ್ಯಮಗಳು ಇಲ್ಲದ ಸಮಯದಲ್ಲೂ ಗಾಂಧಿ ಎಂಬ ಹೆಸರು ಜನರನ್ನು ಒಗ್ಗೂಡಿಸುತ್ತಿತ್ತು. ಅಂತಹ ಅಗಾಧವಾದ ಶಕ್ತಿ ಗಾಂಧೀಜಿಗೆ ಇತ್ತು. ಅಧಿಕಾರ ದುರುಪಯೋಗ ಆದಾಗ ಅದನ್ನು ಪ್ರತಿಭಟಿಸುವುದೇ ನಿಜವಾದ ಸ್ವಾತಂತ್ರದ ಸ್ಥಿತಿ ಎಂದು ಗಾಂಧಿ ನಂಬಿದ್ದರು ಎಂದರು.
ನೆಹರು ಮತ್ತು ಅಂಬೇಡ್ಕರ್ ಜೊತೆ ಗಾಂಧಿಗೆ ವೈಚಾರಿಕ ಸಂಘರ್ಷ ಇತ್ತು. ದೇಶ ವಿಭಜನೆಗೆ ಗಾಂಧಿ ವಿರೋಧ ಇದ್ದರೂ ಇಂದು ದೇಶ ವಿಭಜನೆಗೆ ಗಾಂಧಿಯೇ ಕಾರಣ ಎಂದು ಹೇಳುತ್ತಿರುವುದು ದುರಂತ. ಆಧುನಿಕತೆ ಜನರನ್ನು ಅಪರಿಮಿತರನ್ನಾಗಿಸುತ್ತದೆ ಎಂದು ಗಾಂಧಿ ನಂಬಿದ್ದರು. ಹಾಗಾಗಿ ಅವರು ಅದಕ್ಕೆ ವಿರುದ್ಧಾಗಿದ್ದರು ಎಂದು ಅವರು ತಿಳಿಸಿದರು.
ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಡಾ.ದೇವಿದಾಸ್ ಎಸ್.ನಾಯ್ಕಾ ವಹಿಸಿದ್ದರು. ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ಮಾಲತಿ ದೇವಿ ಎ. ಉಪಸ್ಥಿತರಿದ್ದರು. ಕೇಂದ್ರದ ಸಂಯೋಜಕ ವಿನೀತ್ ರಾವ್ ಸ್ವಾಗತಿಸಿ, ಪ್ರಾಸ್ತಾವಿಕ ವಾಗಿ ಮಾತನಾಡಿ ವಂದಿಸಿದರು.
ಉಪನ್ಯಾಸಕ ಪ್ರಶಾಂತ್ ಉದ್ಯಾವರ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮಕ್ಕೆ ಮೊದಲು ಕಾಲೇಜಿನ ವಿದ್ಯಾರ್ಥಿನಿ ಸಮನ್ವಿ ತಂಡದಿಂದ ರಾಮ್‌ಧುನ್ ಭಜನ್ ಗಾಯನ ನಡೆಯಿತು.