6 ವರ್ಷಗಳಿಂದ ಲಲಿತಾ ಕಲಾ ಅಕಾಡಮಿಗೆ ಉಡುಪಿಯಿಂದ ಪ್ರತಿನಿಧಿಗಳೇ ಇಲ್ಲ: ರಮೇಶ್ ರಾವ್ ಅಸಮಾಧಾನ
ಉಡುಪಿ, ಅ. 2: ಕರ್ನಾಟಕ ಲಲಿತಾ ಕಲಾ ಅಕಾಡೆಮಿಗೆ ಕಳೆದ ಆರು ವರ್ಷಗಳಿಂದ ಉಡುಪಿ ಜಿಲ್ಲೆಯಿಂದ ಒಂದೇ ಒಂದು ಪ್ರತಿನಿಧಿಯನ್ನು ಸರಕಾರ ನೇಮಕ ಮಾಡಿಲ್ಲ. ಇದರ ಬಗ್ಗೆ ಸ್ಥಳೀಯ ಶಾಸಕರು ಗಮನ ಹರಿಸಬೇಕಾಗಿದೆ. ಪ್ರತಿ ಜಿಲ್ಲೆಯಲ್ಲಿ ವಿಶ್ವ ಕಲಾ ದಿನಾಚರಣೆ ಆಚರಿಸಲು ಅಕಾಡೆಮಿಗೆ ಪ್ರತಿನಿಧಿಗಳ ಅಗತ್ಯ ಇದೆ ಎಂದು ಉಡುಪಿ ಆರ್ಟಿಸ್ಟ್ ಫೋರಂ ಅಧ್ಯಕ್ಷ ಹಾಗೂ ಹಿರಿಯ ಲಾವಿದ ರಮೇಶ್ ರಾವ್ ಹೇಳಿದ್ದಾರೆ.
ಕುಂಜಿಬೆಟ್ಟು ಕಟ್ಟೆ ಆಚಾರ್ಯ ರಸ್ತೆಯ ಇನಾಯತ್ ಆರ್ಟ್ ಗ್ಯಾಲರಿಯ ಬೆಳ್ಳಿಹಬ್ಬ ಮತ್ತು ನವೀಕೃತ ಗ್ಯಾಲರಿಯ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಅವರು ಶನಿವಾರ ಮಾತನಾಡುತಿದ್ದರು.
ಗ್ಯಾಲರಿಯನ್ನು ಉದ್ಘಾಟಿಸಿದ ಉಡುಪಿ ಶಾಸಕ ಕೆ.ರಘುಪತಿ ಭಟ್ ಮಾತ ನಾಡಿ, ಕಲಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಮಕ್ಕಳಿಗೆ ಪ್ರೋತ್ಸಾಹ ನೀಡಿದರೆ ಅವರಲ್ಲಿ ಇರುವ ಪ್ರತಿಭೆಗಳು ಹೊರಬರಲು ಸಾಧ್ಯವಾಗುತ್ತದೆ. ಆ ನಿಟ್ಟಿನಲ್ಲಿ ಈ ಗ್ಯಾಲರಿ ಕಾರ್ಯನಿರ್ವಹಿಸಬೇಕಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮಣಿಪಾಲ ಕೆಎಂಸಿ ಆಸ್ಪತ್ರೆಯ ವೈದ್ಯ ಡಾ.ಕಿರಣ್ ಆಚಾರ್ಯ, ಗ್ಯಾಲರಿಯ ನಿರ್ದೇಶಕ ಲಿಯಾಕತ್ ಅಲಿ, ಕರಮತ್ ಅಲಿ ಉಪಸ್ಥಿತರಿದ್ದರು. ರಾಘವೇಂದ್ರ ಪ್ರಭು ಕರ್ವಾಲು ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಈ ಪ್ರಯುಕ್ತ ನೂತನ ಗ್ಯಾಲರಿಯಲ್ಲಿ 30 ಕಲಾವಿದರ ಒಟ್ಟು 60 ಕಲಾಕೃತಿಗಳನ್ನು ಅ.4ರವರೆಗೆ ಬೆಳಗ್ಗೆ 10ಗಂಟೆಯಿಂದ ಸಂಜೆ 7ಗಂಟೆಯ ವರೆಗೆ ಪ್ರದರ್ಶಿಸಲಾಗುತ್ತಿದೆ