ಕುಟುಂಬ ನಿರ್ವಹಣೆ ಜವಾಬ್ದಾರಿಯೊಂದಿಗೆ ಸಾಧಿಸಿ: ಪ್ರತಿಭಾ ಬ್ರಾಗ್ಸ್
ಉಡುಪಿ, ಅ.2: ಮಹಿಳೆಯರು ಸಿಕ್ಕಿರುವ ಅವಕಾಶ ಸದುಪಯೋಗಿಸಿಕೊಳ್ಳ ಬೇಕು. ಆದರೆ ಬಹುತೇಕ ಮಹಿಳೆಯರು ಕುಟುಂಬ ನಿರ್ವಹಣೆಯ ಜವಾಬ್ದಾರಿ ಯಿಂದ ತಮ್ಮ ಸಾಧನೆಯ ದಾರಿಯನ್ನು ಮರೆಯುತ್ತಿದ್ದಾರೆ. ಇದರ ಹೊರ ತಾಗಿಯೂ ಇಂದಿನ ಮಹಿಳೆಯರು ಸಾಧಿಸಬೇಕಾಗಿದೆ ಎಂದು ಮಣಿಪಾಲ ಮಾಹೆ ಧ್ವನಂತರಿ ಕಾಲೇಜ್ ಆಫ್ ನರ್ಸಿಂಗ್ ನಿವೃತ್ತ ಪ್ರಾಂಶುಪಾಲೆ ಪ್ರತಿಭಾ ಲಿಡಿಯಾ ಬ್ರಾಗ್ಸ್ ತಿಳಿಸಿದ್ದಾರೆ.
ಉಡುಪಿ ಕಿದಿಯೂರು ಹೊಟೇಲ್‌ನ ಶೇಷಶಯನ ಸಭಾಂಗಣದಲ್ಲಿ ಶನಿವಾರ ನಡೆದ ಅಖಿಲ ಕರ್ನಾಟಕ ಮಹಿಳಾ ಸೌಂದರ್ಯ ತಜ್ಞೆಯರ ಸಂಘದ ದಶಮಾನೋತ್ಸವ ಸಂಭ್ರಮಾಚರಣೆಯನ್ನು ಉ್ಘಾಟಿಸಿ ಅವರು ಮಾತನಾಡುತ್ತಿದ್ದರು.
ದಶಮಾನೋತ್ಸವ ಸಂಭ್ರಮದ ಅಂಗವಾಗಿ ಹಮ್ಮಿಕೊಂಡ ಸ್ಪರ್ಧೆಯಲ್ಲಿ ಕುಂದಾಪುರ ವಲಯ ಪ್ರಥಮ, ಬೈಂದೂರು ವಲಯ ದ್ವಿತೀಯ, ಉಡುಪಿ ವಲಯ ತೃತೀಯ ಬಹುಮಾನ ಪಡೆದುಕೊಂಡಿತು. ಇದೇ ಸಂದರ್ಭದಲ್ಲಿ ಸಂಘದ ಪದಾಧಿಕಾರಿಗಳನ್ನು ಸಮ್ಮಾನಿಸಲಾಯಿತು.
ಅಧ್ಯಕ್ಷತೆಯನ್ನು ಅಖಿಲ ಕರ್ನಾಟಕ ಮಹಿಳಾ ಸೌಂದರ್ಯ ತಜ್ಞೆಯರ ಸಂಘದ ಜಿಲ್ಲಾಧ್ಯಕ್ಷೆ ವೇದಾ ಎಸ್. ಸುವರ್ಣ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಉದ್ಯಾವರ ಎಂ.ಇ.ಟಿ. ಆಂಗ್ಲ ಮಾಧ್ಯಮ ಶಾಲೆ ಮುಖ್ಯಸ್ಥೆ ಡಾ.ಜುನೇದಾ ಯಾಸಿನ್, ಸೃಷ್ಠಿ ಕಲಾ ತರಬೇತಿಯ ಶಾಸ್ತ್ರೀಯ ನೃತ್ಯ ಕಲಾವಿದೆ ಮಂಜರಿಚಂದ್ರ ಪುಷ್ಪರಾಜ್ ಮಾತನಾಡಿದರು.
ಸಂಘದ ಸ್ಥಾಪಕಾಧ್ಯಕ್ಷೆ ಮರಿಯಾ ಹೆರಾಲ್ಡ್, ಜಿಲ್ಲಾ ಕಾರ್ಯದರ್ಶಿ ಲತಾ ವಾದಿರಾಜ್, ಕೋಶಾಧಿಕಾರಿ ಭಾರತಿ ಉಪಸ್ಥಿತರಿದ್ದರು. ಸಂಘದ ಪದಾಧಿಕಾರಿ ಶುಭಾ ದಿನೇಶ್ ಸ್ವಾಗತಿಸಿದರು. ಗೀತಾ ದಯಾನಂದ ಕಾರ್ಯಕ್ರಮ ನಿರೂಪಿಸಿದರು.