×
Ad

ವಿದ್ಯಾರ್ಥಿಗಳ ಮೇಲೆ ದೌರ್ಜನ್ಯ; ಕಠಿಣ ಕಾನೂನು ಕ್ರಮಕ್ಕೆ ಎಐವೈಎಫ್ ಆಗ್ರಹ

Update: 2021-10-02 18:44 IST

ಮಂಗಳೂರು : ವೈದ್ಯಕೀಯ ಕಾಲೇಜೊಂದರಲ್ಲಿ ಕಲಿಯುತ್ತಿರುವ ಹೊರರಾಜ್ಯದ ಕೆಲವು ವಿದ್ಯಾರ್ಥಿಗಳನ್ನು ಮತೀಯ ಸಂಘಟನೆಯೊಂದರ ಕಾರ್ಯಕರ್ತರೆನ್ನಲಾದವರು ಸುರತ್ಕಲ್ ನಲ್ಲಿ ತಡೆದು, ನಿಂದಿಸಿ ಅಮಾನವೀಯವಾಗಿ ಹಲ್ಲೆ ನಡೆಸಿರುವುದನ್ನು ಅಖಿಲ ಭಾರತ ಯುವಜನ ಫೆಡರೇಶನ್ (ಎಐವೈಎಫ್) ಮಂಗಳೂರು ತಾಲೂಕು ಸಮಿತಿ ಖಂಡಿಸಿದೆ.

ಕಳೆದ 15 ವರ್ಷಗಳಲ್ಲಿ ದ.ಕ. ಮತ್ತು ಉಡುಪಿ ಜಿಲ್ಲೆಯಲ್ಲಿ ವಿದ್ಯಾರ್ಥಿ ಯುವಜನರ ಮೇಲೆ ಇಂತಹ ಅಮಾನುಷ ದಾಳಿಗಳು ನಡೆಯುತ್ತಲೇ ಇವೆ. ಜಿಲ್ಲೆಯಲ್ಲಿ ಸಮಾಜಘಾತುಕ ಹಾಗೂ ಮತೀಯವಾದಿ ಶಕ್ತಿಗಳು ಆಗಾಗ್ಗೆ ಇಂತಹ ದಾಳಿಗಳನ್ನು ಸಂಘಟಿಸುತ್ತಲೇ ಇವೆ. ಇಂತಹ ಸಂಘಟನೆಗಳು ದಾಳಿ ಮಾಡಿದ ಸಂದರ್ಭಗಳಲ್ಲಿ ಪೊಲೀಸರು ಹಲ್ಲೆಗೊಳಗಾದವರಿಗೆ ಬುದ್ಧಿವಾದ ಹೇಳುತ್ತಾರೆಯೇ ವಿನಃ ದಾಳಿಕೋರರ ಮೇಲೆ ದೂರು ದಾಖಲಿಸುವುದಾಗಲೀ, ಬಂಧಿಸಿ ಕಾನೂನು ಕ್ರಮಗಳಿಗೆ ಒಳಪಡಿಸುತ್ತಿಲ್ಲ. ಪೊಲೀಸ್ ಇಲಾಖೆಯ ಇಂತಹ ವೈಫಲ್ಯಗಳೇ ದಾಳಿಕೋರರಿಗೆ ಮತ್ತಷ್ಟು ದಾಳಿಗಳನ್ನು ನಡೆಸಲು ಪ್ರೇರಣೆ ಸಿಕ್ಕಂತಾಗುತ್ತದೆ. ಸುರತ್ಕಲ್ ನಲ್ಲಿ ನಡೆದ ಪ್ರಕರಣ ಇದಕ್ಕೆ ಸಾಕ್ಷಿಯಾಗಿದೆ. ಹಾಗಾಗಿ ಸುರತ್ಕಲ್‌ನಲ್ಲಿ ನಡೆದ ಘಟನೆಯ ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ಜರಗಿಸಬೇಕು ಎಂದು ಆಗ್ರಹಿಸಿರುವ ಎಐವೈಎಫ್ ಮಂಗಳೂರು ತಾಲೂಕು ಅಧ್ಯಕ್ಷ ಪುಷ್ಪರಾಜ್ ಬೋಳೂರು ಹಾಗೂ ಕಾರ್ಯದರ್ಶಿ ಜಗತ್ಪಾಲ್ ಕೋಡಿಕಲ್ ವೈದ್ಯಕೀಯ ವಿದ್ಯಾರ್ಥಿಗಳ ಮೇಲೆ ದಾಳಿಯಾಗುವ ಇಂತಹ ಸಂದರ್ಭಗಳಲ್ಲಿ ಜಿಲ್ಲೆಯ ಐಎಂಎ, ಎಎಂಸಿ ಮತ್ತಿತರ ವೈದ್ಯಕೀಯ ಸಂಘಟನೆಗಳು ಮೌನ ವಹಿಸಿರುವುದು ಆತಂಕಕಾರಿಯಾಗಿದೆ ಎಂದು ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News