ಅತಿಥಿ ಶಿಕ್ಷಕರ ಸಮಸ್ಯೆಗೆ ಪರಿಹಾರ ಕಲ್ಪಿಸಲು ಸಿಎಫ್‌ಐ ಮನವಿ
ಮಂಗಳೂರು, ಅ.2: ವಿದ್ಯಾರ್ಥಿಗಳ ಭವಿಷ್ಯ ರೂಪಿಸುವಲ್ಲಿ ಮಹತ್ವದ ಪಾತ್ರ ನಿರ್ವಹಿಸುವ ಅತಿಥಿ ಶಿಕ್ಷಕರ ಸಮಸ್ಯೆಗೆ ಪರಿಹಾರ ಕಲ್ಪಿಸಬೇಕು ಎಂದು ಒತ್ತಾಯಿಸಿ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ದ.ಕ ಜಿಲ್ಲಾ ಸಮಿತಿಯು ಜಿಲ್ಲಾಧಿಕಾರಿ ಹಾಗೂ ಮಂಗಳೂರು, ಪುತ್ತೂರು, ಬೆಳ್ತಂಗಡಿ, ಬಂಟ್ವಾಳ, ಮೂಡುಬಿದಿರೆ ತಹಶೀಲ್ದಾರುಗಳಿಗೆ ಮನವಿ ಸಲ್ಲಿಸಿತು.
ಸಮಾಜದಲ್ಲಿ ತಮ್ಮದೇ ಆದ ರೀತಿಯಲ್ಲಿ ಕೊಡುಗೆಯನ್ನು ನೀಡುವ ಮೂಲಕ ವಿದ್ಯಾರ್ಥಿಗಳ ಭವಿಷ್ಯ ರೂಪಿಸುವ ಶಿಕ್ಷಕರು ಬೀದಿ ಪಾಲಾಗಿದ್ದಾರೆ. ಲಾಕ್‌ಡೌನ್ ನಂತರ ಸರಿಯಾದ ವೇತನ ಪಾವತಿಯಾಗದೆ ಪರಿತಪಿಸುತ್ತಿದ್ದಾರೆ. ಕಳೆದ 18 ತಿಂಗಳುಗಳಿಂದ ಯಾವುದೇ ವರಮಾನವಿಲ್ಲದೆ ತಮ್ಮ ಜೀವನೋಪಾಯಕ್ಕಾಗಿ ದಿನಗೂಲಿ ಕೆಲಸ ಮಾಡುತ್ತಿದ್ದಾರೆ ಹಾಗಾಗಿ ಸರಕಾರ ಈ ಎಲ್ಲಾ ಸಮಸ್ಯೆಯನ್ನು ಮನಗಂಡು ಅತಿಥಿ ಶಿಕ್ಷಕರಿಗೆ ಖಾಯಂ ಆಗಿ ಭಡ್ತಿ ನೀಡಬೇಕು ಹಾಗೂ ಬಾಕಿಯಿರುವ ವೇತನ ಬಿಡುಗಡೆಗೊಳಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಯಿತು.
ಈ ಸಂದರ್ಭ ಸಿಎಫ್‌ಐ ಮುಖಂಡರಾದ ಹಸನ್ ಸಿರಾಜ್, ಅಶ್ರಫ್ ಪೊರ್ಕೊಡಿ, ಮುಸ್ತಫಾ ಪುತ್ತೂರು , ಗೌಸಿಯಾ , ಸಾದಿಯಾ, ನಬೀಲ್ ಮೂಡುಬಿದಿರೆ, ಸದಾಫ್ ಬೆಳ್ತಂಗಡಿ ಉಪಸ್ಥಿತರಿದ್ದರು.