ಕಾಪು ಕ್ಷೇತ್ರ: ಏಳು ಕಡೆಗಳಲ್ಲಿ ಏಕಕಾಲದಲ್ಲಿ ಸ್ವಚ್ಚತಾ ಕಾರ್ಯಕ್ರಮ
ಕಾಪು: ಗಾಂಧಿ ಜಯಂತಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಜನ್ಮ ದಿನದ ಅಂಗವಾಗಿ ಕಾಪು ವಿಧಾನ ಸಭಾ ಕ್ಷೇತ್ರದ ಪ್ರಮುಖ ಕೇಂದ್ರಗಳಲ್ಲಿ ಕ್ಷೇತ್ರದ ಏಳು ಕಡೆಗಳಲ್ಲಿ ಶಾಸಕ ಲಾಲಾಜಿ ಮೆಂಡನ್ ಅವರ ನೇತೃತ್ವದಲ್ಲಿ ಏಕಕಾಲದಲ್ಲಿ ಸ್ವಚ್ಛ ಭಾರತ ಕಾರ್ಯಕ್ರಮ ನಡೆಯಿತು.
ಶಾಸಕರಾದ ಲಾಲಾಜಿ ಆರ್ ಮೆಂಡನ್ ರವರ ಆಶಯದಂತೆ ಪ್ರಮುಖ 7 ಸ್ಥಳಗಳಾದ ಕಾಪು, ಕಟಪಾಡಿ, ಶಿರ್ವ, ಪಡುಬಿದ್ರೆ, ಬೆಳ್ಳೆ, ಹಿರಿಯಡ್ಕ, ಪೆರ್ಡೂರ್ ನಲ್ಲಿ ಬೆಳಿಗ್ಗೆಯಿಂದ ಸ್ಥಳೀಯ ಸಂಘ-ಸಂಸ್ಥೆಗಳು, ಶಾಲಾ-ಕಾಲೇಜು ವಿದ್ಯಾರ್ಥಿಗಳು, ಸ್ಥಳೀಯ ಗ್ರಾಮ ಪಂಚಾಯತ್ ಸದಸ್ಯರು, ಸ್ಥಳೀಯ ಪ್ರಮುಖರ ಸಹಭಾಗಿತ್ವದೊಂದಿಗೆ ಆಯೋಜಿಸಲಾಯಿತು.
ಶಾಸಕ ಲಾಲಾಜಿ ಆರ್ ಮೆಂಡನ್, ಹಿರಿಯಡ್ಕ ಕೇಂದ್ರದಲ್ಲಿ ಉದ್ಯಮಿ ಗುರ್ಮೆ ಸುರೇಶ್ ಶೆಟ್ಟಿ, ಪಡುಬಿದ್ರೆ ಕೇಂದ್ರದಲ್ಲಿ ಉದ್ಯಮಿ ಪ್ರಕಾಶ್ ಶೆಟ್ಟಿ, ಶಿರ್ವ ಕೇಂದ್ರದಲ್ಲಿ ಕರಾವಳಿ ಪ್ರಾಧಿಕಾರದ ಅಧ್ಯಕ್ಷರು ಮಟ್ಟಾರು ರತ್ನಾಕರ್ ಹೆಗ್ಡೆ, ಕಟಪಾಡಿ ಕೇಂದ್ರದಲ್ಲಿ ಅಲೆವೂರು ಪಂಚಾಯತ್ ಮಾಜಿ ಅಧ್ಯಕ್ಷರು ಶ್ರೀಕಾಂತ್ ನಾಯಕ್, ಪೆರ್ಡೂರ್ ಕೇಂದ್ರದಲ್ಲಿ ಉದ್ಯಮಿ ಸುರೇಶ್ ನಾಯಕ್ ಕುಯಿಲಾಡಿ ಚಾಲನೆ ನೀಡಿದರು.
ಕ್ಷೇತ್ರದ ವಿವಿದೆಡೆಯಲ್ಲಿ ಸುಮಾರು 16 ವಿದ್ಯಾಸಂಸ್ಥೆಗಳ ವಿದ್ಯಾರ್ಥಿಗಳು, ಆಟೋ ಚಾಲಕ ಮಾಲಕರ ಸಂಘ, ಸ್ಥಳೀಯ ರೋಟರಿ ಕ್ಲಬ್, ಜೆಸಿಐ ಹಾಗೂ ಇನ್ನಿತರ ಸಂಘ ಸಂಸ್ಥೆಗಳ ಸದಸ್ಯರು, ಸ್ಥಳೀಯ ಗ್ರಾಮ ಪಂಚಾಯತ್ ಸದಸ್ಯರು, ವಿವಿಧ ಇಲಾಖೆಗಳ ಅಧಿಕಾರಿಗಳು ಸಿಬ್ಬಂದಿಗಳು, ಸ್ಥಳೀಯ ಮುಖಂಡರು ಹಾಗೂ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದರು.