ಭವಾನಿಪುರ ಉಪ ಚುನಾವಣೆ: ಮಮತಾ ಬ್ಯಾನರ್ಜಿಗೆ ಭಾರೀ ಮುನ್ನಡೆ

Update: 2021-10-03 08:38 GMT

ಕೋಲ್ಕತ್ತಾ: ದಕ್ಷಿಣ ಕೊಲ್ಕತ್ತಾ ಕ್ಷೇತ್ರವಾದ ಭವಾನಿಪುರದ ಉಪಚುನಾವಣೆಯ ಮತ ಎಣಿಕೆ ರವಿವಾರ ಬೆಳಗ್ಗೆ ಆರಂಭವಾಗಿದ್ದು ಈ ಕ್ಷೇತ್ರದಲ್ಲಿ ಸ್ಪರ್ಧಿಸಿರುವ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಮತ ಎಣಿಕೆಯ 19 ಸುತ್ತುಗಳ ನಂತರ  52,010 ಮತಗಳಿಂದ ಮುನ್ನಡೆ ಸಾಧಿಸಿದ್ದಾರೆ.  ಮಮತಾ ಬ್ಯಾನರ್ಜಿ (ಟಿಎಂಸಿ): 76,413 ಮತಗಳು, ಪ್ರಿಯಾಂಕಾ ಟಿಬ್ರೆವಾಲ್ (ಬಿಜೆಪಿ): 24,396 ಮತಗಳು ಹಾಗೂ  ರಾಜೀಬ್ ಬಿಸ್ವಾಸ್ (ಎಡ): 3,534 ಮತಗಳನ್ನು ಗಳಿಸಿದ್ದಾರೆ.

 ಸೆಪ್ಟಂಬರ್ 30ರಂದು ನಡೆದಿರುವ  ಉಪ ಚುನಾವಣೆಯ ಮತ ಎಣಿಕೆಯಲ್ಲಿ ಒಟ್ಟು 21 ಸುತ್ತುಗಳಿರುತ್ತವೆ.

ಇದೇ ವೇಳೆ, ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಅವರು  ಭರ್ಜರಿ ಗೆಲುವಿನ ಹಾದಿಯಲ್ಲಿರುವ  ಮಮತಾ ಬ್ಯಾನರ್ಜಿಗೆ ಅಭಿನಂದನೆ ಸಲ್ಲಿಸಿ ಟ್ವೀಟಿಸಿದ್ದಾರೆ.

ಟಿಎಂಸಿ ಕಾರ್ಯಕರ್ತರು ಹಾಗೂ ಬೆಂಬಲಿಗರು ಮಮತಾ ಅವರ ಮನೆಯ ಹೊರಗೆ ಜಮಾಯಿಸಿ ಪರಸ್ಪರ ಬಣ್ಣವನ್ನು ಎರಚಿಕೊಂಡು ಕುಣಿದು ಸಂಭ್ರಮಾಚರಣೆ ಆಚರಿಸಲಾರಂಭಿಸಿದ್ದಾರೆ.

ಈ ವರ್ಷದ ಆರಂಭದಲ್ಲಿ ನಡೆದ ರಾಜ್ಯ ಚುನಾವಣೆಯಲ್ಲಿ ಮಮತಾ ಸೋತಿದ್ದರು. ಹೀಗಾಗಿ ಬಂಗಾಳದ ಮುಖ್ಯಮಂತ್ರಿಯಾಗಿ ಉಳಿಯಲು ಭವಾನಿಪುರ ಕ್ಷೇತ್ರವನ್ನು ಗೆಲ್ಲಲೇಬೇಕು.

ಇಬ್ಬರು ಅಭ್ಯರ್ಥಿಗಳ ಸಾವಿನ ನಂತರ ಉಪಚುನಾವಣೆ ನಡೆದ ಬಂಗಾಳದ ಮುರ್ಷಿದಾಬಾದ್‌ನ ಸಂಸರ್‌ಗಂಜ್ ಹಾಗೂ  ಜಂಗೀಪುರ ಸ್ಥಾನಗಳಲ್ಲಿ ತೃಣಮೂಲ ಕಾಂಗ್ರೆಸ್ ಪಕ್ಷವು ಮುನ್ನಡೆಯಲ್ಲಿದೆ.

ಮಮತಾ ಬ್ಯಾನರ್ಜಿ ಅವರು ನಂದಿಗ್ರಾಮದಲ್ಲಿ ಸುವೇಂದು ಅಧಿಕಾರಿ ವಿರುದ್ಧ ಸೋತಿದ್ದರು. ಇದೀಗ ಮಮತಾ ವಿರುದ್ಧ ಸ್ಪರ್ಧಿಸಿರುವ  ಬಿಜೆಪಿ ಅಭ್ಯರ್ಥಿ ಪ್ರಿಯಾಂಕಾ ಟಿಬ್ರೆವಾಲ್ ವಕೀಲರಾಗಿದ್ದಾರೆ. 41 ವರ್ಷದ ಅವರು ಇತ್ತೀಚಿನ ವಿಧಾನಸಭಾ ಚುನಾವಣೆ ಹಾಗೂ  2015 ರ ಮುನ್ಸಿಪಲ್ ಚುನಾವಣೆಯಲ್ಲಿ ಸೋತಿದ್ದರೂ, ರಾಜ್ಯ ಸರಕಾರದ ವಿರುದ್ಧದ ಚುನಾವಣೆಯ ನಂತರದ ಹಿಂಸಾಚಾರ  ಪ್ರಕರಣಕ್ಕೆ ಸಂಬಂಧಿಸಿ ಅರ್ಜಿ ಸಲ್ಲಿಸಿದವರಲ್ಲಿಒಬ್ಬರಾಗಿ ಅವರು ಪ್ರಸಿದ್ಧರಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News