×
Ad

ಪಿಲಿಕುಳದ ಗೂಡಿನಿಂದ ಹೊರಬಂದಿದ್ದ ಸಿಂಹ !

Update: 2021-10-03 11:02 IST

ಮಂಗಳೂರು: ವಾಮಂಜೂರಿನ ಪಿಲಿಕುಳ ಡಾ.ಶಿವರಾಮ ಕಾರಂತ ವನ್ಯಜೀವಿ ಧಾಮದ ಸಿಂಹವೊಂದು ತನ್ನ ಗೂಡಿನಿಂದ ಹೊರಗೆ ಬಂದಿದ್ದರಿಂದ ಆತಂಕಕ್ಕೆ ಕಾರಣವಾದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಮೃಗಾಲಯದ ಸಿಬ್ಬಂದಿಯ ನಿರ್ಲಕ್ಷ್ಯದಿಂದಾಗಿ ಘಟನೆ ಸಂಭವಿಸುತ್ತಿತ್ತು ಎಂದು ಹೇಳಲಾಗುತ್ತಿದ್ದು, ಆದರೆ ಅದೃಷ್ಟವಶಾತ್ ಯಾವುದೇ ಪ್ರಾಣಹಾನಿಯಾಗಿಲ್ಲ. ಅಂದಹಾಗೆ ಈ ಘಟನೆ ನಡೆದದ್ದು,  ಇದೇ ಜುಲೈ ತಿಂಗಳಲ್ಲಿ. ವಿಷಯ ತಡವಾಗಿ ಬಹಿರಂಗಗೊಂಡಿದೆ.

ಪಿಲಿಕುಳದಲ್ಲಿ ಕಾಡು ಪ್ರಾಣಿಗಳಾದ ಚಿರತೆ, ಹುಲಿ, ನಂತರದಲ್ಲಿ ಸಿಂಹದ ಎನ್‌ಕ್ಲೋಶರ್ ಇದೆ. ಎನ್‌ಕ್ಲೋಶರ್ ಎಂದರೆ ಮೃಗಾಲಯದ ಪ್ರಾಣಿಗಳಿಗೆ ವಿಹರಿಸುವುದಕ್ಕೆ ಬೇಕಾದ ವಿಶಾಲವಾದ ಆವರಣವಾಗಿದೆ. ಇದರ ಕೊನೆಯಲ್ಲಿ ಆಳವಾದ ಕಂದಕ ಹಾಗೂ ಬೇಲಿ ಇರುವುದರಿಂದ ಮೃಗಗಳಿಗೆ ಸಾಮಾನ್ಯವಾಗಿ ಹೊರಗೆ ಬರುವುದಕ್ಕೆ ಸಾಧ್ಯವಾಗುವುದಿಲ್ಲ. ವೀಕ್ಷಕರು ಹೊರಗೆ ನಿಂತು ಸುರಕ್ಷಿತವಾಗಿ ಪ್ರಾಣಿಗಳನ್ನು ನಿರ್ಭಯದಿಂದ ವೀಕ್ಷಿಸಬಹುದಾಗಿದೆ.

ಈ ಎನ್‌ಕ್ಲೋಶರ್‌ನ ಒಂದು ಬದಿಯಲ್ಲಿ ಮೃಗಗಳಿಗೆ ಮಲಗುವುದಕ್ಕೆ ಗೂಡುಗಳು ಇರುತ್ತವೆ. ಅವುಗಳಿಗೆ ಆಹಾರವನ್ನು ನೀಡುವ, ಚಿಕಿತ್ಸೆ ನೀಡುವ ವ್ಯವಸ್ಥೆ ಎಲ್ಲವೂ ಇದರಲ್ಲೇ ಮಾಡಲಾಗಿರುತ್ತದೆ. ಅದರಂತೆ ಜುಲೈ ತಿಂಗಳ ಒಂದು ದಿನ ಸಿಂಹದ ಗೂಡು ಸ್ವಚ್ಛಗೊಳಿಸಲು ತೆರಳಿದ್ದ ಸಿಬ್ಬಂದಿ ಯಡವಟ್ಟು ಮಾಡಿಕೊಂಡಿದ್ದ ಎಂದು ತಿಳಿದುಬಂದಿದೆ.

ಸಿಂಹದ ಗೂಡಿನ ಬಳಿ ಕಂದಕ ಇರುವುದಿಲ್ಲ, ಒಂದು ಗೇಟ್ ದಾಟಿಕೊಂಡು ಹೋಗಿ ಗೂಡಿನೊಳಗೆ ಶುಚಿಗೊಳಿಸುತ್ತಿರುವಾಗ ಇನ್ನೊಂದು ಗೇಟ್‌ನ ಚಿಲಕ ಹಾಕಿರಲಿಲ್ಲ. ಆಗ ಸಿಂಹ ದಿಢೀರನೇ ಹೊರಬಂದಿದೆ. ನೌಕರ ಈ ವಿಚಾರವನ್ನು ಮೇಲಧಿಕಾರಿಗಳ ಗಮನಕ್ಕೆ ತಂದಿದ್ದಾನೆ.

ಮೂರು ತಂಡ ರಚಿಸಿ ಕಾರ್ಯಾಚರಣೆ: ವಿಷಯ ತಿಳಿಯುತ್ತಿದ್ದಂತೆ ಕೂಡಲೇ ಜಾಗೃತರಾದ ಪಿಲಿಕುಳದ ನಿರ್ದೇಶಕ ಎಚ್.ಜಯಪ್ರಕಾಶ್ ಭಂಡಾರಿ, ಮೂರು ತಂಡಗಳನ್ನು ರಚಿಸಿ ಕಾರ್ಯಾಚರಣೆಗೆ ಆದೇಶ ಹೊರಡಿಸಿದರು.

ಈ ತಂಡಗಳು ನಾಪತ್ತೆಯಾದ ಸಿಂಹಕ್ಕಾಗಿ ಮೃಗಾಲಯದ ಆವರಣ ಹುಡುಕಾಟ ನಡೆಸಿದವು. ಈ ನಡುವೆ ಅಲ್ಲಿ ಕೆಲಸ ಮಾಡುತ್ತಿದ್ದ ಸಿಬ್ಬಂದಿಯನ್ನು ಸುರಕ್ಷಿತ ಜಾಗದಲ್ಲಿರುವಂತೆಯೂ ಸೂಚಿಸಲಾಗಿತ್ತು. ಸುಮಾರು ಮೂರು ಗಂಟೆಗಳ ನಿರಂತರ ಕಾರ್ಯಾಚರಣೆ ಬಳಿಕ ಸಿಂಹ ಪತ್ತೆಯಾಗಿದೆ.

ಸಿಂಹದ ಗೂಡಿನ ಹಿಂಭಾಗದಲ್ಲಿನ ಪ್ಯಾಡಕ್ (ಬೇಲಿ ಹಾಕಿದ ಆವರಣ)ನಲ್ಲಿ ಹುಲ್ಲಿನ ಮರೆಯಲ್ಲಿ ಸಿಂಹ ಪತ್ತೆಯಾಗಿದೆ. ಅದನ್ನು ಟ್ರಾಂಕ್ವಿಲೈಜ್ (ಪ್ರಜ್ಞೆ ತಪ್ಪಿಸುವುದು) ಮಾಡಿ ಮತ್ತೆ ಗೂಡಿಗೆ ಸೇರಿಸಲಾಯಿತು.

ಇಂತಹ ಘಟನೆ ನಡೆದಾಗ ಸನ್ನದ್ಧರಾಗಲು ನಮಗೂ ಒಂದು ತರಬೇತಿ ನೀಡಿದಂತಾಯಿತು. ಅದೃಷ್ಟವಷಾತ್ ಯಾವುದೇ ಅಪಾಯ ನಡೆದಿಲ್ಲ, ಸಿಂಹ ಹೊರಬಂದಿಲ್ಲ, ಪ್ಯಾಡಕ್‌ನಲ್ಲೇ ಇತ್ತು ಎನ್ನುತ್ತಾರೆ ಪಿಲಿಕುಳ ಡಾ.ಶಿವರಾಮ ಕಾರಂತ ವನ್ಯಜೀವಿ ಧಾಮದ ನಿರ್ದೇಶಕ ಜಯಪ್ರಕಾಶ್ ಭಂಡಾರಿ.

ಮೃಗಾಲಯಗಳಲ್ಲಿ ಇಂತಹ ಘಟನೆಗಳು ಅಪರೂಪಕ್ಕೊಮ್ಮೆ ನಡೆಯುತ್ತವೆ. ಇಲ್ಲಿ ಸಾರ್ವಜನಿಕರಿಗೆ ಅಪಾಯವಾಗುವ ಯಾವುದೇ ಪ್ರಶ್ನೆಯೇ ಇಲ್ಲ ಎಂದೂ ಅವರು ವಿವರಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News