ಸಾಮಾಜಿಕ, ಆರ್ಥಿಕ ಪತನದಂಚಿನಲ್ಲಿ ಅಫ್ಘಾನಿಸ್ತಾನ: ಯುರೋಪಿಯನ್ ಯೂನಿಯನ್

Update: 2021-10-03 17:31 GMT

ಬ್ರಸೆಲ್ಸ್, ಅ.3: ಅಫ್ಘಾನಿಸ್ತಾನದ ಸಾಮಾಜಿಕ ಮತ್ತು ಆರ್ಥಿಕ ವ್ಯವಸ್ಥೆ ಪತನದಂಚಿನಲ್ಲಿದ್ದು ಆ ದೇಶಕ್ಕೆ ಮಾನವೀಯ ದುರಂತದ ಅಪಾಯ ಎದುರಾಗಿದೆ ಎಂದು ಯುರೋಪಿಯನ್ ಯೂನಿಯನ್ನ ವಿದೇಶಿ ಕಾರ್ಯನೀತಿ ಮುಖ್ಯಸ್ಥ ಜೋಸೆಫ್ ಬೊರೆಲ್ ರವಿವಾರ ಹೇಳಿದ್ದಾರೆ.

ಅಫ್ಘಾನಿಸ್ತಾನದಲ್ಲಿ ಗಂಭೀರ ಪ್ರಮಾಣದ ಮಾನವೀಯ ಬಿಕ್ಕಟ್ಟು ಮತ್ತು ಸಾಮಾಜಿಕ-ಆರ್ಥಿಕ ವ್ಯವಸ್ಥೆಯ ಪತನ ಸನ್ನಿಹಿತವಾಗಿದ್ದು ಇದು ದೇಶದ ಜನತೆಗೆ, ಪ್ರಾದೇಶಿಕ ಹಾಗೂ ಅಂತರಾಷ್ಟ್ರೀಯ ಭದ್ರತೆಗೆ ಅಪಾಯಕಾರಿಯಾಗಿದೆ. ಹೆಚ್ಚಿನ ಅಂತರಾಷ್ಟ್ರೀಯ ನೆರವು ಲಭ್ಯವಾಗುವ ಪರಿಸ್ಥಿತಿ ನೆಲೆಸುವಂತೆ ತಾಲಿಬಾನ್ ಕ್ರಮ ಕೈಗೊಂಡರೆ ಈ ಕೆಟ್ಟ ಸನ್ನಿವೇಶವನ್ನು ನಿವಾರಿಸಬಹುದಾಗಿದೆ ಎಂದು ಬ್ಲಾಗ್ನಲ್ಲಿ ಪೋಸ್ಟ್ ಮಾಡಿದ್ದಾರೆ.
  
ಆಗಸ್ಟ್ನಲ್ಲಿ ತಾಲಿಬಾನ್ ಅಧಿಕಾರಕ್ಕೇರಿದ ಬಳಿಕ ಆಹಾರವಸ್ತುಗಳ ಬೆಲೆ 50%ಕ್ಕೂ ಹೆಚ್ಚು ಏರಿಕೆಯಾಗಿದ್ದು, ವಿದೇಶಿ ಹೂಡಿಕೆ ಹಿಂದೆಗೆತ ಮತ್ತು ವಿದೇಶಗಳಲ್ಲಿ ಅಫ್ಘಾನಿಸ್ತಾನಕ್ಕೆ ಸಂಬಂಧಿಸಿದ 9 ಮಿಲಿಯನ್ ಡಾಲರ್ ಮೌಲ್ಯದ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಂಡಿರುವುದು ಇದಕ್ಕೆ ಕಾರಣವಾಗಿದೆ. ಬ್ಯಾಂಕ್ಗಳಿಂದ ಹಣ ಹಿಂಪಡೆಯಲು ಸಾಧ್ಯವಾಗುತ್ತಿಲ್ಲ. ಬಹುತೇಕ ವಿದೇಶಿ ನೆರವಿಗೆ ಅವಲಂಬಿತವಾಗಿದ್ದ ದೇಶದ ಆರೋಗ್ಯ ಕ್ಷೇತ್ರ ಪತನದ ಅಂಚಿನಲ್ಲಿದೆ. ಚಳಿಗಾಲ ಸನ್ನಿಹಿತವಾಗಿರುವಂತೆಯೇ ಈ ಅಪಾಯವು ಮಾನವೀಯ ದುರಂತವಾಗಿ ಬದಲಾಗುತ್ತಿದೆ. ಪರಿಸ್ಥಿತಿ ಇದೇ ರೀತಿ ಮುಂದುವರಿದರೆ ನೆರೆ ದೇಶಗಳಿಗೆ ಸಾಮೂಹಿಕ ವಲಸೆ ಹೆಚ್ಚಬಹುದು ಎಂದು ಬೊರೆಲ್ ಹೇಳಿದ್ದಾರೆ.
 
ತಾಲಿಬಾನ್ ಅಧಿಕಾರಕ್ಕೆ ಬಂದ ಬಳಿಕ ಅಫ್ಘಾನ್ಗೆ ನೀಡುತ್ತಿರುವ ಮಾನವೀಯ ನೆರವಿನ ಉಪಕ್ರಮಗಳನ್ನು ಯುರೋಪಿಯನ್ ಯೂನಿಯನ್ ಹೆಚ್ಚಿಸಿದ್ದರೂ ಅಭಿವೃದ್ಧಿ ಕಾರ್ಯಕ್ಕೆ ನೆರವನ್ನು ಸ್ಥಗಿತಗೊಳಿಸಿದೆ. ಇದನ್ನು ಪುನರಾರಂಭಿಸುವುದು ಅಫ್ಘಾನಿಸ್ತಾನದ ನೂತನ ಆಡಳಿತದ ವರ್ತನೆಯನ್ನು ಅವಲಂಬಿಸಿದೆ. ಮಾನವ ಹಕ್ಕುಗಳನ್ನು ಗೌರವಿಸುವುದು ಸೇರಿದಂತೆ ಇತರ ಷರತ್ತುಗಳಿಗೆ ತಾಲಿಬಾನ್ ಬದ್ಧವಾದರೆ ಸಂಬಂಧ ಸುಧಾರಿಸಲಿದೆ. ಎಲ್ಲಕ್ಕಿಂತ ಮುಖ್ಯವಾಗಿ, ಅಫ್ಘಾನ್ ಜನತೆಗೆ ಅಂತರಾಷ್ಟ್ರೀಯ ಸಮುದಾಯದ ನೆರವು ಲಭ್ಯವಾಗಿಸುವ ಕ್ರಮಗಳನ್ನು ತಾಲಿಬಾನ್ ಕೈಗೊಳ್ಳಬೇಕಿದೆ. ಅಂತರಾಷ್ಟ್ರೀಯ ಸಂಘಸಂಸ್ಥೆಗಳ ಮಹಿಳಾ ಉದ್ಯೋಗಿಗಳು ಕೆಲಸ ಮಾಡುವುದಕ್ಕೆ ಪೂರಕವಾದ ವಾತಾವರಣ ನಿರ್ಮಿಸಬೇಕು ಎಂದವರು ಹೇಳಿದ್ದಾರೆ.

ತಾಲಿಬಾನ್ಗಳೊಂದಿಗೆ ಖತರ್ ಹೊಂದಿರುವ ಸಂಪರ್ಕವು ತಾಲಿಬಾನ್ಗಳ ನಡವಳಿಕೆಯನ್ನು ಸುಧಾರಿಸುವ ಉದ್ದೇಶ ಹೊಂದಿದೆ ಎಂದ ಅವರು, ಅಫ್ಘಾನಿಸ್ತಾನಕ್ಕೆ ಎದುರಾಗಿರುವ ಅಪಾಯ ದೂರವಾಗುವುದನ್ನು ಖಾತರಿಪಡಿಸಲು ಈ ಪ್ರಭಾವವನ್ನು ಖತರ್ ಬಳಸಬೇಕು ಎಂದು ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News