ಅಮೆಝಾನ್ ‘ಲೀಗಲ್ ಫೀ’ ಪ್ರಕರಣ; ಪ್ರಧಾನಿ ಮೋದಿ ಉತ್ತರಿಸಲಿ: ಡಾ.ಅಮೀ ಯಜ್ಞಿಕ್ ಆಗ್ರಹ

Update: 2021-10-04 08:01 GMT

ಮಂಗಳೂರು, ಅ.4: ಇ ಕಾಮರ್ಸ್ ಸಂಸ್ಥೆಯಾದ ಅಮೆಝಾನ್‌ನ ಕಾನೂನು ಸಲಹೆಗಾರರು ಭಾರತದ ಸರಕಾರದ ಅಧಿಕಾರಿಗಳಿಗೆ ನೀಡಿದ್ದಾರೆನ್ನುವ 8,546 ಕೋಟಿ ರೂ.ಗಳು ಲಂಚ ಪ್ರಕರಣವಾಗಿದ್ದು, ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿಯವರು ಸ್ಪಷ್ಟ ಪಡಿಸಬೇಕು ಎಂದು ಎಐಸಿಸಿ ವಕ್ತಾರೆ, ರಾಜ್ಯಸಭಾ ಸದಸ್ಯೆ ಡಾ. ಅಮೀ ಯಜ್ಞಿಕ್ ಆಗ್ರಹಿಸಿದ್ದಾರೆ.

ದ.ಕ. ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಇದೊಂದು ಬಹುದೊಡ್ಡ ಹಗರಣವಾಗಿದೆ. ಈ ಹಣ ಎಲ್ಲಿಗೆ ಹೋಗುತ್ತಿದೆ. ಯಾರಿಗೆ ಹೋಗುತ್ತಿದೆ ಎಂಬುದನ್ನು ಜನತೆಗೆ ತಿಳಿಯುವ ಹಕ್ಕಿದೆ. ಸರಕಾರದ ಅಧಿಕಾರಿಗಳಿಗೆ ಈ ಹಣ ನೀಡಲಾಗಿದೆ ಎನ್ನಲಾಗಿರುವ ಬಗ್ಗೆ ಸುಪ್ರೀಂ ಕೋರ್ಟ್‌ನ ನ್ಯಾಯಾಧೀಶರಿಂದ ತನಿಖೆಗೊಳಪಡಿಸಬೇಕೆಂದು ಆಗ್ರಹಿಸಿ ತಾನು ಈಗಾಗಲೇ ಪ್ರಧಾನಿ ಸೇರಿದಂತೆ ಸರಕಾರಕ್ಕೆ ಪತ್ರವನ್ನೂ ಬರೆದಿರುವುದಾಗಿ ಹೇಳಿದರು.

ವಿದೇಶಿ ಇ ಕಾಮರ್ಸ್ ಸಂಸ್ಥೆಯೊಂದು ಸರಕಾರದ ಅಧಿಕಾರಿಗಳಿಗೆ ಲೀಗಲ್ ಫೀಯಾಗಿ ಇಷ್ಟೊಂದು ಹಣವನ್ನು ನೀಡಿದೆ ಎನ್ನುವಾಗ ಸರಕಾರದ ನೇತೃತ್ವ ವಹಿಸಿರುವ ಪ್ರಧಾನಿ ಮನ್ ಕಿ ಬಾತ್‌ನ ಮೂಲಕವಾದರೂ ವೌನ ಮುರಿಯಬೇಕು ಎಂದರು.

ಕಳೆದ 70 ವರ್ಷಗಳಲ್ಲಿ ಕಾಂಗ್ರೆಸ್ ಆಡಳಿತಾವಧಿಯಲ್ಲಿ ಮಾಡಿರುವ ಆಸ್ತಿಯನ್ನು ಪ್ರಸಕ್ತ ಕೇಂದ್ರ ಸರಕಾರ ಖಾಸಗಿಯರಿಗೆ ಮಾರಾಟ ಮಾಡುವುದರಲ್ಲಿ ತಲ್ಲೀನವಾಗಿದೆ. ಈ ನಡುವೆ ಸಣ್ಣ ಪುಟ್ಟ ವ್ಯಾಪಾರಸ್ಥರು ಸೇರಿದಂತೆ ಸಣ್ಣ , ಕಿರು ಹಾಗೂ ಮಧ್ಯಮ ಗಾತ್ರದ ಕೈಗಾರಿಕೆಗಳು ಬಾಗಿಲು ಮುಚ್ಚುತ್ತಿವೆ. ಕಳೆದ ಒಂದೂವರೆ ವರ್ಷದಲ್ಲಿ 14 ಕೋಟಿ ಉದ್ಯೋಗ ನಷ್ಟವಾಗಿರುವುದಾಗಿ ಅಂದಾಜಿಸಲಾಗಿದೆ. ಈ ಬಗ್ಗೆಯೂ ಕೇಂದ್ರ ಸರಕಾರ ಅಂಕಿಅಂಶಗಳನ್ನು ನೀಡುತ್ತಿಲ್ಲ. ಮಾತ್ರವಲ್ಲದೆ ಸಂಕಷ್ಟದಲ್ಲಿರುವ ಈ ಸಣ್ಣ ಉದ್ಯಮಗಳನ್ನು, ವ್ಯಾಪಾರಿಗಳಿಗೆ ಯಾವ ಹೊಸ ಯೋಜನೆಗಳನ್ನು ಜಾರಿಗೊಳಿಸಿದೆ ಎಂಬುದನ್ನೂ ತಿಳಿಸುತ್ತಿಲ್ಲ. ಆತ್ಮನಿರ್ಭರ್ ಭಾರತವೆಂದು ಹೇಳಿಕೊಂಡು ಇರುವ ಸರಕಾರಿ ಸಂಸ್ಥೆಗಳೆಲ್ಲವನ್ನೂ ಶ್ರೀಮಂತ ಉದ್ಯಮಿಗಳಿಗೆ ಮಾರಾಟ ಮಾಡಿ ಯುವ ಜನಾಂಗವನ್ನು ಉದ್ಯೋಗ ವಂಚಿತರನ್ನಾಗಿಸಿ, ಮುಂದಿನ ಜನಾಂಗಕ್ಕೆ ಸರಕಾರ ಏನನ್ನು ಉಳಿಸುತ್ತಿದೆ ಎಂದು ಅವರು ಪ್ರಶ್ನಿಸಿದರು.

ಸಾಮಾನ್ಯ ಜನರು ಸಂಕಷ್ಟ ಪಡುತ್ತಿದ್ದಾರೆ, ಉದ್ಯಮಗಳು ನಷ್ಟವಾಗುತ್ತಿದ್ದರೂ ಬಿಜೆಪಿಯನ್ನು ಜನರು ಬೆಂಬಲಿಸಲು ಕಾರಣವೇನೆಂಬ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಡಾ. ಅಮೀ ಯಜ್ಞಿಕ್, ಸತ್ಯವನ್ನು ಹೆಚ್ಚುದಿನಗಳ ಕಾಲ ಮುಚ್ಚಿಡಲು ಸಾಧ್ಯವಿಲ್ಲ. ಒಂದು ದಿನ ಸತ್ಯ ಹೊರಬರಲಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ದ.ಕ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್, ಮುಖಂಡರಾದ ಪಿ.ವಿ. ಮೋಹನ್, ಸದಾಶಿವ ಉಳ್ಳಾಲ್, ಜೋಕಿಂ ಡಿಸೋಜ, ಆರಿಫ್ ಬಾವಾ, ನೀರಜ್ ಪಾಲ್, ಗಣೇಶ್ ಪೂಜಾರಿ, ಶುಭೋದಯ ಆಳ್ವ, ಲಾರೆನ್ಸ್ ಡಿಸೋಜ, ಟಿ.ಕೆ. ಸುಧೀರ್, ನಝೀರ್ ಬಜಾಲ್ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News