ಡ್ರಗ್ಸ್‌ ಪ್ರಕರಣ: ಆರ್ಯನ್‌ ಖಾನ್‌ ಗೆ ಜಾಮೀನು ನಿರಾಕರಣೆ, ಕಸ್ಟಡಿ ವಿಸ್ತರಣೆ

Update: 2021-10-04 17:51 GMT

ಮುಂಬೈ,ಅ.4: ವಿಹಾರ ನೌಕೆಯಲ್ಲಿ ಡ್ರಗ್ಸ್ ಪಾರ್ಟಿ ಪ್ರಕರಣದಲ್ಲಿ ಬಂಧಿತ,ನಟ ಶಾರೂಕ್ ಖಾನ್ ಅವರ ಪುತ್ರ ಆರ್ಯನ್ ಖಾನ್(23)ಗೆ ಸೋಮವಾರ ಜಾಮೀನು ನಿರಾಕರಿಸಿರುವ ಇಲ್ಲಿಯ ನ್ಯಾಯಾಲಯವು ಅವರನ್ನು ಗುರುವಾರದವರೆಗೆ ಮಾದಕ ದ್ರವ್ಯ ನಿಯಂತ್ರಣ ಘಟಕ (ಎನ್‌ಸಿಬಿ)ದ ಕಸ್ಟಡಿಗೆ ನೀಡಿದೆ. ಜಾಮೀನು ಅರ್ಜಿಯ ವಿಚಾರಣೆ ಸಂದರ್ಭದಲ್ಲಿ ಶಾರೂಕ್ ಖಾನ್ ಮತ್ತು ಅವರ ಪತ್ನಿ ಗೌರಿ ಖಾನ್ ಉಪಸ್ಥಿತರಿರಲಿಲ್ಲ.

 ನ್ಯಾಯಾಧೀಶರು ನಿರ್ಧಾರವನ್ನು ಪ್ರಕಟಿಸಿದಾಗ ಆರ್ಯನ್ ಶಾಂತವಾಗಿದ್ದರೆ ಅವರ ಸ್ನೇಹಿತರಾದ ಅರ್ಬಾಜ್ ಮರ್ಚಂಟ್ ಮತ್ತು ಮೂನ್‌ಮೂನ್ ಧಮೇಚಾ ಗದ್ಗದಿತರಾಗಿದ್ದರು.

ಶನಿವಾರ ಸಂಜೆ ಮುಂಬೈನಿಂದ ಗೋವಾಕ್ಕೆ ಸಂಚರಿಸುತ್ತಿದ್ದ ಕೊರ್ಡೆಲಿಯಾ ಕ್ರೂಸ್ ವಿಹಾರ ನೌಕೆಯಲ್ಲಿ ನಡೆಯುತ್ತಿದ್ದ ಡ್ರಗ್ಸ್ ಪಾರ್ಟಿಯ ಮೇಲೆ ದಾಳಿ ನಡೆಸಿ ಮಾದಕ ದ್ರವ್ಯಗಳನ್ನು ವಶಪಡಿಸಿಕೊಂಡು ಆರ್ಯನ್ ಸೇರಿದಂತೆ ಎಂಟು ಜನರನ್ನು ವಶಕ್ಕೆ ತೆಗೆದುಕೊಂಡಿದ್ದ ಎನ್‌ಸಿಬಿ ಅಧಿಕಾರಿಗಳು ರವಿವಾರ ಅವರನ್ನು ಬಂಧಿಸಿದ್ದರು.

ಈ ಪ್ರಕರಣದಲ್ಲಿ ಅಂತರರಾಷ್ಟ್ರೀಯ ಮಾದಕ ದ್ರವ್ಯ ಕೂಟವೊಂದು ಭಾಗಿಯಾಗಿದೆ ಎಂದು ಸೋಮವಾರ ನ್ಯಾಯಾಲಯದಲ್ಲಿ ವಾದಿಸಿದ ಎನ್‌ಸಿಬಿ,ಆರ್ಯನ್‌ರನ್ನು ಪ್ರಶ್ನಿಸಲು ಅ.11ರವರೆಗೆ ಕಸ್ಟಡಿ ಅಗತ್ಯವಾಗಿದೆ ಎಂದು ಹೇಳಿತು.

 ಬಳಕೆದಾರನ ತನಿಖೆ ನಡೆಸದಿದ್ದರೆ ಮಾದಕ ದ್ರವ್ಯಗಳ ಪೂರೈಕೆದಾರರು ಯಾರು,ಅದಕ್ಕೆ ಹಣಕಾಸನ್ನು ಯಾರು ಒದಗಿಸುತ್ತಿದ್ದಾರೆ ಎನ್ನುವುದನ್ನು ತಿಳಿದುಕೊಳ್ಳಲು ಸಾಧ್ಯವಾಗುವುದಿಲ್ಲ ಎಂದೂ ಅದು ತಿಳಿಸಿತು.

 ಚಾಟ್ ಇತ್ಯಾದಿ ರೂಪಗಳಲ್ಲಿರುವ ಸಂಪರ್ಕಗಳು ಅಂತರರಾಷ್ಟ್ರೀಯ ಕೂಟವು ಭಾಗಿಯಾಗಿರುವುದನ್ನು ತೋರಿಸುತ್ತಿವೆ. ಅದು ಗ್ಯಾಂಗ್‌ನಂತೆ ವ್ಯಕ್ತಿಗಳ ಗುಂಪಾಗಿದೆ ಎಂದು ನ್ಯಾಯಾಲಯಕ್ಕೆ ತಿಳಿಸಿದ ಎನ್‌ಸಿಬಿ ಪರ ವಕೀಲರು,ಆರ್ಯನ್‌ರ ಚಾಟ್‌ಗಳಲ್ಲಿ ಪತ್ತೆಯಾಗಿರುವ ಕೋಡ್ ಹೆಸರುಗಳು ಹಾಗೂ ಬ್ಯಾಂಕ್ ಮತ್ತು ನಗದು ವರ್ಗಾವಣೆಯ ಕೊಂಡಿಗಳನ್ನು ಪರಿಶೀಲಿಸಬೇಕಿದೆ ಎಂದು ಹೇಳಿದರು.

ಆರ್ಯನ್ ಪರ ಹಿರಿಯ ನ್ಯಾಯವಾದಿ ಸತೀಶ ಮಾನಶಿಂಧೆ ಅವರು,ತನ್ನ ಕಕ್ಷಿದಾರರು ವಿಹಾರ ನೌಕೆಯಲ್ಲಿ ಅತಿಥಿಯಾಗಿದ್ದರು ಮತ್ತು ಪ್ರಕರಣದಲ್ಲಿ ವಶಪಡಿಸಿಕೊಳ್ಳಲಾಗಿರುವ ಅಷ್ಟೂ ಮಾದಕ ದ್ರವ್ಯಗಳಿಗೂ ಅವರಿಗೂ ತಳುಕು ಹಾಕುವಂತಿಲ್ಲ. ತನಿಖಾ ತಂಡಕ್ಕೆ ಅವರ ಬ್ಯಾಗಿನಲ್ಲಿ ಹೇಳಿಕೊಳ್ಳುವಂತಹ ಮಾದಕದ್ರವ್ಯ ಸಿಕ್ಕಿಲ್ಲ,ಕೇವಲ ಆರು ಗ್ರಾಂ ಡ್ರಗ್ಸ್ ಪತ್ತೆಯಾಗಿದ್ದು ಇದು ಅತ್ಯಲ್ಪ ಪ್ರಮಾಣವಾಗಿದೆ. ಅಧಿಕಾರಿಗಳು ಅವರ ಪೋನ್‌ನಲ್ಲಿ ವಾಟ್ಸ್‌ಆ್ಯಪ್ ಚಾಟ್‌ಗಳನ್ನು ಮಾತ್ರ ಪತ್ತೆ ಮಾಡಿದ್ದು,ಅವು ಅಂತಹ ಮಹತ್ವವನ್ನು ಹೊಂದಿಲ್ಲ ಎಂದು ವಾದಿಸಿದರು.

ತನ್ನ ಕಕ್ಷಿದಾರರು ತನ್ನ ವಿದೇಶಿ ವಾಸದ ಇಡೀ ಅವಧಿಯಲ್ಲಿ ಎಂದೂ ಮಾದಕ ದ್ರವ್ಯವನ್ನು ಬಳಸಿಲ್ಲ ಎಂದು ತಿಳಿಸಿದ ಮಾನಶಿಂಧೆ,ಇತರ ಆರೋಪಿಗಳಿಂದ ವಶಪಡಿಸಿಕೊಳ್ಳಲಾಗಿರುವ ವಾಣಿಜ್ಯಿಕ ಪ್ರಮಾಣದ ಮಾದಕ ದ್ರವ್ಯ ತನ್ನ ಕಕ್ಷಿದಾರರ ಕಸ್ಟಡಿಯನ್ನು ಕೋರಲು ಒಂದು ಕಾರಣವಾಗಿದೆ. ಇತರರಿಂದ ವಶಪಡಿಸಿಕೊಳ್ಳಲಾದ ವಾಣಿಜ್ಯಿಕ ಪ್ರಮಾಣದ ಮಾದಕ ದ್ರವ್ಯಗಳನ್ನು ತನ್ನ ಕಕ್ಷಿದಾರರ ಮೇಲೆ ಹೇರುವಂತಿಲ್ಲ. ಅವರು(ಎನ್‌ಸಿಬಿ) ಅಂತರರಾಷ್ಟ್ರೀಯ ಮಾದಕ ದ್ರವ್ಯ ಕಳ್ಳ ಸಾಗಣೆಯ ಬಗ್ಗೆ ಮಾತನಾಡುತ್ತಿದ್ದಾರೆ. ಇದು ಅತ್ಯಂತ ಗಂಭೀರ ಆರೋಪವಾಗಿದ್ದು,ಇದಕ್ಕೆ ಸಾಕ್ಷಾಧಾರಗಳ ಬೆಂಬಲ ಅಗತ್ಯವಾಗಿದೆ ಎಂದು ವಾದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News