×
Ad

ಗಂಗೊಳ್ಳಿಯಲ್ಲಿ ಅವಹೇಳನಕಾರಿ ಘೋಷಣೆ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಮುಸ್ಲಿಮ್ ಒಕ್ಕೂಟದಿಂದ ಮನವಿ

Update: 2021-10-04 19:48 IST

ಕುಂದಾಪುರ, ಅ.4: ಗಂಗೊಳ್ಳಿಯಲ್ಲಿ ಗೋಹತ್ಯೆ ವಿಚಾರವನ್ನು ಮುಂದಿಟ್ಟು ಕೊಂಡು ಸಾವಿರಕ್ಕೂ ಮಿಕ್ಕಿ ಜನರನ್ನು ಸೇರಿಸಿ ಕೋಮು ಗಲಭೆ ಸೃಷ್ಟಿಸುವ ಹುನ್ನಾರದೊಂದಿಗೆ, ಪೈಗಂಬರರನ್ನು, ಮುಸಲ್ಮಾನರನ್ನು ಅವಹೇಳನ ಮಾಡಿ ಘೋಷಣೆ ಕೂಗಿ ಜಾಥ ನಡೆಸಿದವರ ವಿರುದ್ದ ಕಾನೂನು ಕ್ರಮ ಕೈಗೊಳ್ಳಲು ಮತ್ತು ಶಾಂತಿ ಸುವ್ಯವಸ್ಥೆ ಕಾಪಾಡಬೇಕೆಂದು ಆಗ್ರಹಿಸಿ ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟ ಕುಂದಾಪುರ ತಾಲೂಕು ಘಟಕದ ನಿಯೋಗವು ಇಂದು ಕುಂದಾಪುರ ಡಿವೈಎಸ್ಪಿ ಶ್ರೀಕಾಂತ್ ಅವರಿಗೆ ಮನವಿ ಸಲ್ಲಿಸಿತು.

ಕೆಲವು ಕೋಮುವಾದಿ ಶಕ್ತಿಗಳು ಕೋಮುಗಲಭೆಯನ್ನುಂಟು ಮಾಡುವ ವಾತಾವರಣವನ್ನು ಸೃಷ್ಟಿಸಲು ಪ್ರಯತ್ನಿಸಿದ್ದಾರೆ. ಮೆರವಣಿಗೆಯಲ್ಲಿ ಇಸ್ಲಾಮ್ ಧರ್ಮದ ಬಗ್ಗೆ ಅವಾಚ್ಯ ಪದಗಳನ್ನು ಬಳಸಿ, ಪ್ರವಾದಿ(ಸ) ಅವರನ್ನು, ಮುಸ್ಲಿಮರನ್ನು ಅವಹೇಳನ ಮಾಡಿ ನಮ್ಮ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಆಗುವಂತಹ ಘೋಷಣೆಯನ್ನು ಕೂಗಲಾಗಿದೆ. ಈ ಮೂಲಕ ನಮ್ಮ ಧಾರ್ಮಿಕ ನಂಬಿಕೆಗಳನ್ನು ಅವಮಾನಗೊಳಿಸಿ ಅಘಾತವನ್ನುಂಟು ಮಾಡಿದ್ದಾರೆ. ಮತೀಯ ವರ್ಗಗಳ ವಿರುದ್ಧ ವೈರತ್ವ ಮತ್ತು ವೈಮನಸ್ಸು ಉಂಟು ಮಾಡಲು ಈ ಕೃತ್ಯವನ್ನು ಮಾಡಲಾಗಿದೆ ಎಂದು ನಿಯೋಗ ಮನವಿಯಲ್ಲಿ ದೂರಿದೆ.

ಮನವಿಯೊಂದಿಗೆ ವಿಷಯಕ್ಕೆ ಸಂಬಂಧ ಪಟ್ಟ ವಿಡಿಯೋವನ್ನು ಡಿ.ವಿ.ಡಿ ಮೂಲಕ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಘಟಕದ ತಾಲೂಕು ಅಧ್ಯಕ್ಷ ಮುಹಮ್ಮದ್ ರಫೀಕ್, ಉಪಾಧ್ಯಕ್ಷ ಎಸ್.ದಸ್ತಗೀರ್ ಕಂಡ್ಲೂರು, ಕಾರ್ಯ ದರ್ಶಿ ಮೌಲಾನ ಝಮೀರ್ ಅಹ್ಮದ್ ರಶಾದಿ, ಜೊತೆ ಕಾರ್ಯದರ್ಶಿ ಎಸ್.ಎಸ್.ಹನೀಫ್ ಗುಲ್ವಾಡಿ, ಜಿಲ್ಲಾ ಸಮಿತಿ ಸದಸ್ಯರಾದ ಮುಜಾವರ್ ಅಬು, ಮುಹಮ್ಮದ್ ಕುಂದಾಪುರ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News