ಬೆಳ್ತಂಗಡಿ ತಾಲೂಕಿನಲ್ಲಿ ಭಾರೀ ಮಳೆ

Update: 2021-10-04 16:23 GMT

ಬೆಳ್ತಂಗಡಿ: ತಾಲೂಕಿನ ಹೆಚ್ಚಿನ ಪ್ರದೇಶಗಳಲ್ಲಿ  ಸೋಮವಾರ ಮಧ್ಯಾಹ್ನದ ಬಳಿಕ ಉತ್ತಮ ಮಳೆಯಾಗಿದೆ. ಕೆಲವು ಕಡೆಗಳಲ್ಲಿ ಭಾರಿ ಮಳೆ ಸುರಿದಿದ್ದು  ಹಲವೆಡೆ ತೋಟ ಗದ್ದೆಗಳಿಗೆ ನೀರುನುಗ್ಗಿದೆ. ರಾಷ್ಟ್ರೀಯ ಹೆದ್ದಾರಿಯಲ್ಲಿಯೂ ನೀರು ನುಗ್ಗಿದೆ.

ಮುಂಡಾಜೆ, ಕಲ್ಮಂಜ, ಕಡಿರುದ್ಯಾವರ, ಮಲವಂತಿಗೆ, ದಿಡುಪೆ, ತೋಟತ್ತಾಡಿ  ಪರಿಸರಗಳಲ್ಲಿ ಭಾರಿ ಮಳೆ ಸುರಿದಿದೆ. ಕಡಿರುದ್ಯಾವರ ಗ್ರಾಮದ ಎರ್ಮಾಲ್ ಫಲ್ಕೆಯ  ಬೈಲು ಹಳ್ಳದಲ್ಲಿ ಭಾರಿ ಪ್ರಮಾಣದ ನೀರು ಹರಿದು ಸಮೀಪದ ಕೃಷಿ ತೋಟ ಹಾಗೂ ಗದ್ದೆಗಳಿಗೆ ನೀರು ನುಗ್ಗಿತ್ತು.

ಮುಂಡಾಜೆಯ ಧೂಂಬೆಟ್ಟು, ಕಜೆ ಸೋಮಂತಡ್ಕ  ಪರಿಸರದಲ್ಲಿ ಗುಡುಗು ಸಹಿತ ಮಳೆಯ ಜತೆ ಗಾಳಿಯು ಬೀಸಿದ್ದು ಕೆಲವು ತೋಟಗಳಲ್ಲಿ ಅಡಕೆ ಮರಗಳು ಮುರಿದು ಬಿದ್ದಿವೆ. ತೋಟತ್ತಾಡಿ ಪರಿಸರಸಲ್ಲಿಯೂ ಮಳೆ ಸುರಿದಿದ್ದು ತೋಟಗಳಿಗೆ ನೀರು ನುಗ್ಗಿದೆ. ಮೃತ್ಯುಂಜಯ ಹಾಗೂ ನೇತ್ರಾವತಿ ನದಿಗಳ ನೀರಿನ ಹರಿವು ಹೆಚ್ಚಾಗಿದೆ.

ಗುರುವಾಯನಕೆರೆ ಪರಿಸರದಲ್ಲಿ ಭಾರೀ ಮಳೆಗೆ ರಸ್ತೆಯಲ್ಲಿ ಮಳೆನೀರು ಹರಿದು ವಾಹನ ಸಂಚಾರಕ್ಕೆ ಅಡಚಣೆಯುಂಟಾಗಿತ್ತು. ಮದ್ದಡ್ಕದಲ್ಲಿ ಚರಂಡಿಗಳ ನೀರು ರಸ್ತೆಗೆ ಉಕ್ಕಿ ಹರಿದು ರಸ್ತೆ ಬದಿಯಲ್ಲಿರುವ  ಅಂಗಡಿಗಳಿಗೆ ನೀರು  ನುಗ್ಗಿದೆ. ವ್ಯಾಪಾರಸ್ತರಿಗೆ ಹಾಗೂ ವಾಹನ ಚಾಲಕರಿಗೆ ತೊಂದರೆಯುಂಟಾಯಿತು. ಸುಮಾರು ಅರ್ಧ ಗಂಟೆ ಈ ಪ್ರದೇಶಗಳಲ್ಲಿ ಭಾರೀ ಮಳೆ ಸುರಿಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News