×
Ad

ಕೈಪುಂಜಾಲು ಸಫರ್ ಝಿಯಾರತ್ ಸಾಂಕೇತಿಕ ಆಚರಣೆಗೆ ಸೀಮಿತ : ಅಬ್ದುಲ್ ಹಮೀದ್ ಮಾಸ್ಟರ್

Update: 2021-10-04 22:09 IST

ಕಾಪು : ಕಾಪು ಕೈಪುಂಜಾಲಿನ ಸಮುದ್ರ ಕಿನಾರೆಯಲ್ಲಿರುವ ಸಯ್ಯದ್ ಅರಬಿ ವಲಿಯುಲ್ಲಾರವರ ಈ ವರ್ಷದ  ಸಫರ್ ಝಿಯಾರತ್ ಕೋವಿಡ್ 19 ಹಿನ್ನಲೆಯಲ್ಲಿ ಅ. 6ರಂದು ಸಾಂಕೇತಿಕವಾಗಿ ನಡೆಯಲಿದೆ ಎಂದು ಕಾಪು ಪೊಲಿಪು ಜಾಮಿಯಾ ಮಸೀದಿಯ ಕಾರ್ಯದರ್ಶಿ ಅಬ್ದುಲ್ ಹಮೀದ್ ಮಾಸ್ಟರ್ ಹೇಳಿದರು.

ಕಾಪು ಪ್ರೆಸ್‍ಕ್ಲಬ್‍ನಲ್ಲಿ ಸೋಮವಾರ ಕರೆದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಕಾಪು-ಪೊಲಿಪು ಜಾಮಿಯಾ ಮಸೀದಿಯ ಆಡಳಿತಕ್ಕೆ ಒಳಪಟ್ಟ ಕೈಪುಂಜಾಲು ಸಯ್ಯಿದ್ ಅರಬಿ ವಲಿಯುಲ್ಲಾ ದರ್ಗಾದಲ್ಲಿ ಇಸ್ಲಾಮಿಕ್ ಕ್ಯಾಲೆಂಡರ್ ಸಫರ್ ತಿಂಗಳ ಕೊನೆಯ ಬುಧವಾರ ನಡೆಯಲಿದೆ. ಈ ಬಾರಿ ಸರಕಾರ ಸೂಚಿಸಿರುವ ಕೋವಿಡ್ 19 ಮಾನದಂಡಗಳನ್ನು ಅನುಸರಿಸಿಕೊಂಡು ಸರಳವಾಗಿ ನಡೆಯಲಿದೆ.

ಸೀಮಿತ ಜನರಿಗೆ ಮಾತ್ರ ಭಾಗವಹಿಸಲು ಅವಕಾಶವಿರುವುದರಿಂದ ಕಾಪು ಪೊಲಿಪು ಜಾಮಿಯಾ ಮಸೀದಿಯ ಜಮಾತರಿಗೆ ಮಾತ್ರ ಸೀಮಿತಗೊಳಿಸಲಾಗಿದೆ.  ಪರ ಜಮಾತರಿಗೆ ಭಾಗವಹಿಸಲು ಅವಕಾಶವಿರುವುದಿಲ್ಲ.  10 ವರ್ಷ ವಯಸ್ಸಿನ ಕೆಳಗಿನ ಮಕ್ಕಳು ಹಾಗೂ 60 ವರ್ಷ ಮೇಲ್ಪಟ್ಟ ವಯಸ್ಕರಿಗೆ ಭಾಗವಹಿಸಲು ಅವಕಾಶ ಇಲ್ಲ. ಭಾಗವಹಿಸುವವರು ಮಾಸ್ಕ್ ಧರಿಸಿಕೊಂಡು ಸುರಕ್ಷಿತ ಅಂತರ  ಪಾಲಿಸುವುದನ್ನು ಕಡ್ಡಾಯಗೊಳಿಸಲಾಗಿದೆ. ಯಾವುದೇ ತಾತ್ಕಾಲಿಕ ಸ್ಟಾಲ್‍ಗಳಿಗೆ ಅವಕಾಶವಿರುವುದಿಲ್ಲ. ಶಾಶ್ವತವಾಗಿ ಇರುವ ಅಂಗಡಿಗಳಿಗೆ ಮಾತ್ರ ವ್ಯಾಪಾರ ನಡೆಸಲು ಅವಕಾಶವಿದೆ. ದರ್ಗಾದ ಒಳಗೆ ಗುರುಗಳ ಹೊರತಾಗಿ ಬೇರೆಯವರಿಗೆ ಪ್ರವೇಶಾವಕಾಶ ಇಲ್ಲ. ಸಂಜೆ 5 ರವರೆಗೆ ಝಿಯಾರತ್ ಕೊನೆಗೊಳ್ಳಲಿದೆ ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಕಾಪು ಪೊಲಿಪು ಜಾಮಿಯಾ ಮಸೀದಿಯ ಅಧ್ಯಕ್ಷ ಎಚ್. ಅಬ್ದುಲ್ಲಾ, ಉಪಾಧ್ಯಕ್ಷ ಹಾಜಿ ರಜಬ್ ಮೊಯಿದಿನ್, ಜತೆಕಾರ್ಯದರ್ಶಿ ಇಲ್ಯಾಸ್ ಅಬೂಬಕರ್, ಶೇಖ್ ನಝೀರ್, ಇಮ್ತಿಯಾಝ್ ಅಹಮದ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News