ಅಕ್ರಮ ಹಣ ವರ್ಗಾವಣೆ ಆರೋಪ:‌ ಯುನಿಟೆಕ್ ಪ್ರವರ್ತಕ ಸಂಜಯ ಚಂದ್ರ ಪತ್ನಿಯ ಬಂಧನ

Update: 2021-10-04 17:41 GMT

ಹೊಸದಿಲ್ಲಿ,ಅ.1: ಜೈಲಿನಲ್ಲಿರುವ ಯುನಿಟೆಕ್ ಪ್ರವರ್ತಕ ಸಂಜಯ್ ಚಂದ್ರ ಅವರ ಪತ್ನಿ ಪ್ರೀತಿ ಚಂದ್ರ ಅವರನ್ನು ಜಾರಿ ನಿರ್ದೇಶನಾಲಯ(ಈ.ಡಿ.)ವು ದಾಖಲಿಸಿಕೊಂಡಿರುವ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಬಂಧಿಸಲಾಗಿದೆ. ಸಂಜಯ ಚಂದ್ರ ಅವರ ತಂದೆ ರಮೇಶ ಚಂದ್ರ(80) ಅವರನ್ನೂ ಬಂಧಿಸಲಾಗಿದೆ.

ಈ.ಡಿ.ಈ ವರ್ಷದ ಆರಂಭದಲ್ಲಿ ಯುನಿಟೆಕ್ ಗ್ರೂಪ್ ಮತ್ತು ಅದರ ಪ್ರವರ್ತಕರಾದ ಸಂಜಯ್ ಚಂದ್ರ ಮತ್ತು ಸೋದರ ಅಜಯ ಚಂದ್ರ ಅವರ ವಿರುದ್ಧ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯ ವಿವಿಧ ಕಲಮ್‌ಗಳಡಿ ಕ್ರಿಮಿನಲ್ ಪ್ರಕರಣವನ್ನು ದಾಖಲಿಸಿಕೊಂಡಿತ್ತು. ಸೈಪ್ರಸ್ ಮತ್ತು ಕೇಮನ್ ಐಲ್ಯಾಂಡ್ಸ್‌ಗೆ 2,000 ಕೋ.ರೂ.ಗೂ ಅಧಿಕ ಹಣವನ್ನು ಅಕ್ರಮವಾಗಿ ರವಾನಿಸಿದ್ದ ಆರೋಪಗಳನ್ನು ಅವರು ಎದುರಿಸುತ್ತಿದ್ದಾರೆ.

ಈವರೆಗೆ ನಿರ್ಧರಿಸುವಂತೆ ಈ ಪ್ರಕರಣದಲ್ಲಿ ಒಟ್ಟು 5,063.05 ಕೋ.ರೂ.ಗಳಷ್ಟು ಹಣ ಅಪರಾಧಕ್ಕೆ ಬಳಕೆಯಾಗಿದೆ ಎಂದು ಈ.ಡಿ.ಹೇಳಿತ್ತು.

ಈ.ಡಿ.ಮಾರ್ಚ್‌ನಲ್ಲಿ ಮುಂಬೈ ಮತ್ತು ದಿಲ್ಲಿಗಳಲ್ಲಿ ಯುನಿಟೆಕ್ ಗ್ರೂಪ್ ಮತ್ತು ಶಿವಾಲಿಕ್ ಗ್ರೂಪ್,ತ್ರಿಕಾರ ಗ್ರೂಪ್ ಮತ್ತು ಕಾರ್ನೌಸ್ಟಿ ಗ್ರೂಪ್ ಗಳಿಗೆ ಸೇರಿದ 35 ಸ್ಥಳಗಳಲ್ಲಿ ದಾಳಿಗಳನ್ನು ನಡೆಸಿತ್ತು. ಜೂನ್‌ನಲ್ಲಿ ಈ.ಡಿ.ಅಧಿಕಾರಿಗಳು ಅಕ್ರಮ ಹಣ ವರ್ಗಾವಣೆ ತನಿಖೆಗೆ ಸಂಬಂಧಿಸಿದಂತೆ 58.62 ಕೋ.ರೂ.ವೌಲ್ಯದ ಲಂಡನ್‌ನ ಬೆಡ್ ಆ್ಯಂಡ್ ಬ್ರೇಕ್‌ಫಾಸ್ಟ್ ಎಂಬ ಹೋಟೆಲ್‌ನ್ನು ಜಪ್ತಿ ಮಾಡಿದ್ದರು. ಈ ಹೋಟೆಲ್ ಕಾರ್ನೌಸ್ಟಿ ಗ್ರೂಪ್‌ನ ಸಹವರ್ತಿ ಸಂಸ್ಥೆ ಲಂಡನ್ನಿನ ಐಬರ್ನಶೋರ್ನ ಲಿಮಿಟೆಡ್‌ನ ಒಡೆತನಕ್ಕೆ ಸೇರಿದ್ದಾಗಿದೆ. ಇದು ಭಾರತದಲ್ಲಿ ಮತ್ತು ವಿದೇಶಗಳಲ್ಲಿ ಜಪ್ತಿ ಮಾಡಲಾಗಿರುವ ಚಂದ್ರಾಗಳಿಗೆ ಸೇರಿದ 600 ಕೋ.ರೂ.ಮೌಲ್ಯದ ಆಸ್ತಿಗಳಲ್ಲಿ ಸೇರಿದೆ.

ರಮೇಶ ಚಂದ್ರ ಮತ್ತು ಅವರ ಪುತ್ರರು ಕೆನರಾ ಬ್ಯಾಂಕಿಗೆ 198 ಕೋ.ರೂ.ಗಳನ್ನು ವಂಚಿಸಿರುವ ಆರೋಪವನ್ನೂ ಎದುರಿಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News