×
Ad

ರಸ್ತೆ ಬದಿ ತ್ಯಾಜ್ಯ ಎಸೆತ: 10 ಸಾವಿರ ರೂ. ದಂಡ ವಿಧಿಸಿದ ಅಡ್ಯಾರ್ ಗ್ರಾಮ ಪಂಚಾಯತ್

Update: 2021-10-05 17:57 IST

ಮಂಗಳೂರು, ಅ.5: ಅಡ್ಯಾರ್ ಗ್ರಾಪಂ ವ್ಯಾಪ್ತಿಯಲ್ಲಿ ಹೊಟೇಲ್‌ವೊಂದರ ತ್ಯಾಜ್ಯವನ್ನು ರಸ್ತೆ ಬದಿ ಎಸೆದ ಆರೋಪದಲ್ಲಿ ಹೋಟೆಲ್ ಮಾಲಕರಿಗೆ 10 ಸಾವಿರ ರೂ. ದಂಡ ವಿಧಿಸಿದ ಘಟನೆ ನಡೆದಿದೆ.

ಹೊಟೇಲ್‌ನವರು ತ್ಯಾಜ್ಯವನ್ನು ರಸ್ತೆ ಬದಿ ಬಿಸಾಡುತ್ತಿದ್ದ ಸಂದರ್ಭ ಸ್ಥಳಕ್ಕೆ ಹಠಾತ್ತನೇ ದಾಳಿ ನಡೆಸಿದ ಅಡ್ಯಾರ್ ಗ್ರಾಪಂ ಅಧ್ಯಕ್ಷರು, ಪಿಡಿಒ ಮತ್ತು ಸಿಬ್ಬಂದಿ ಕೃತ್ಯವನ್ನು ಖಂಡಿಸಿದ್ದಾರೆ. ಈ ವೇಳೆ ಆ ತ್ಯಾಜ್ಯ ತಮ್ಮದಲ್ಲವೆಂದು ಹೊಟೇಲ್‌ನವರು ಸಮಜಾಯಿಷಿ ನೀಡಿದ್ದಾರೆ. ಹೊಟೇಲ್ ಸಿಬ್ಬಂದಿ ಹಾಗೂ ಗ್ರಾಪಂ ಸಿಬ್ಬಂದಿ ನಡುವೆ ವಾಗ್ವಾದ ನಡೆಯಿತು.

ಈ ಸಂದರ್ಭದಲ್ಲಿ ತ್ಯಾಜ್ಯವನ್ನು ತೆಗೆದುಕೊಂಡ ಗ್ರಾಪಂ ಸಿಬ್ಬಂದಿಯು ಆ ತ್ಯಾಜ್ಯವನ್ನು ಹೋಟೆಲ್‌ನ ಎದುರು ಸುರಿದಿದ್ದಾರೆ. ಪರಿಶೀಲನೆ ವೇಳೆ ತ್ಯಾಜ್ಯದಲ್ಲಿ ಅದೇ ಹೋಟೆಲ್‌ನ ಬಿಲ್‌ಗಳು ಇರುವುದು ಕಂಡುಬಂದಿದೆ. ಹೊಟೇಲ್‌ನವರಿಗೆ ಗ್ರಾಪಂನಿಂದ ಎಚ್ಚರಿಕೆ ನೀಡಿ, 10 ಸಾವಿರ ರೂ. ದಂಡ ವಿಧಿಸಲಾಗಿದೆ.

ಮುಂದಿನ ದಿನಗಳಲ್ಲಿ ಅಡ್ಯಾರ್ ಗ್ರಾಪಂ ವ್ಯಾಪ್ತಿಯ ರಸ್ತೆ ಬದಿ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ತ್ಯಾಜ್ಯ ಬಿಸಾಡುವುದು ಕಂಡು ಬಂದಲ್ಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಲಾಗುವುದು ಎಂದು ಗ್ರಾಪಂ ಪಿಡಿಒ ಎಚ್ಚರಿಕೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News