×
Ad

ಕೋಮು ದ್ವೇಷ ಪೂರಿತ ಭಾಷಣ; ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಲು ವಿಐಎಂ ಆಗ್ರಹ

Update: 2021-10-05 18:06 IST

ಮಂಗಳೂರು, ಅ. 5: ವಿಶ್ವ ಹಿಂದೂ ಪರಿಷತ್-ಭಜರಂಗದದ ವತಿಯಿಂದ ಸುರತ್ಕಲ್‌ನಲ್ಲಿ ಸೊಮವಾರ ನಡೆದ ಜನಜಾಗೃತಿ ಸಭೆಯಲ್ಲಿ ಚೈತ್ರಾ ಕುಂದಾಪುರ ಎಂಬಾಕೆ ಮುಸ್ಲಿಂ ಸಮುದಾಯವನ್ನು ಮತ್ತು ಮುಸ್ಲಿಂ ಮಹಿಳೆಯರನ್ನು ಅತ್ಯಂತ ತುಚ್ಛವಾದ ಭಾಷೆಯಲ್ಲಿ ನಿಂದಿಸಿ ಕೋಮು ಪ್ರಚೋದನಕಾರಿಯಾಗಿ ಭಾಷಣ ಮಾಡಿ ಸಮಾಜದ ಶಾಂತಿ ಸುವ್ಯವಸ್ಥೆಯನ್ನು ಕದಡಲು ಯತ್ನಿಸಿದ ಘಟನೆಯನ್ನು ವಿಮೆನ್ ಇಂಡಿಯಾ ಮೂವ್‌ಮೆಂಟ್ ದ.ಕ ಜಿಲ್ಲಾಧ್ಯಕ್ಷೆ ನಸ್ರಿಯಾ ಬೆಳ್ಳಾರೆ ಖಂಡಿಸಿದ್ದಾರೆ.

ಈಕೆಯ ವಿರುದ್ಧ ಪೊಲೀಸ್ ಇಲಾಖೆಯು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿ ಬಂಧಿಸಬೇಕು ಎಂದು ಒತ್ತಾಯಿಸಿರುವ ನಸ್ರಿಯಾ ಬೆಳ್ಳಾರೆ ಸಂಘಪರಿವಾರ ಒಡೆದು ಆಳುವ ನೀತಿಯ ಭಾಗವಾಗಿ ದೇಶದೆಲ್ಲೆಡೆ ಅರಾಜಕತೆ ಸೃಷ್ಟಿಸುತ್ತಿದೆ. ಅದರ ಮುಂದುವರಿದ ಭಾಗವಾಗಿ ಇಂತಹ ಯುವತಿಯರನ್ನು ಬಳಸಿಕೊಂಡು ಭಾಷಣ ಮಾಡಿಸಿ ಹಿಂದೂ ಮಹಿಳೆಯರನ್ನು ಭಾವನಾತ್ಮಕವಾಗಿ ಪ್ರಚೋದಿಸುತ್ತಿದೆ ಎಂದರು.

ಭಾರತದಲ್ಲಿ ಕರಾಳ ಕಾನೂನುಗಳ ವಿರುದ್ಧ ನ್ಯಾಯಯುತವಾಗಿ ಧ್ವನಿ ಎತ್ತಿದ ಮಹಿಳೆಯರ ಮೇಲೆ ಯುಎಪಿಎಯಂತಹ ಕರಾಳ ಕಾನೂನು ಗಳನ್ನು ಬಳಸಿಕೊಂಡು ಬಂಧಿಸುವ ಪೊಲೀಸ್ ಇಲಾಖೆ ಮತ್ತು ಸರಕಾರ ಇಂತಹ ಕ್ರಿಮಿಗಳ ಮೇಲೆ ಮೃದು ಧೋರಣೆ ತೋರಿ ಇವರ ಕೋಮು ಧ್ವೇಷದ ಭಾಷಣ ಮತ್ತು ಪ್ರವೃತ್ತಿಗಳಿಗೆ ಪ್ರೇರಣೆ ನೀಡುತ್ತಿದೆ ಎಂದು ಆರೋಪಿಸಿದ್ದಾರೆ.

ದ್ವೇಷ ಭಾಷಣ ಮಾಡಿ ಮುಸ್ಲಿಂ ಮಹಿಳೆಯರ ಸಾಮೂಹಿಕವಾಗಿ ಮಾನಹರಣ, ಬಲಾತ್ಕಾರವಾಗಿ ಮತಾಂತರ ಮಾಡಲು ಪ್ರೇರಣೆ ಮತ್ತು ಹಿಂದೂ ಮುಸ್ಲಿಮರ ನಡುವೆ ದ್ವೇಷ ಬಿತ್ತುವಂತಹ ಹೇಳಿಕೆಗಳನ್ನು ಕಾನೂನಿಗೆ ಗೌರವ ನೀಡದೆ ಬಹಿರಂಗವಾಗಿ ಹೇಳಿಕೆ ನೀಡಿದ ಚೈತ್ರಾ ಕುಂದಾಪುರಳ ವಿರುದ್ಧ ಹಾಗೂ ಈ ಸಭೆಯ ಆಯೋಜಕರ ವಿರುದ್ಧ ಕ್ರಮ ಜರುಗಿಸಬೇಕು. ಇಲ್ಲದಿದ್ದಲ್ಲಿ ವಿಐಎಂ ವತಿಯಿಂದ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News