×
Ad

ಮಂಗಳೂರಿನಲ್ಲಿ ಶೂಟೌಟ್ ಪ್ರಕರಣ: ಉದ್ಯಮಿ ಪೊಲೀಸ್ ವಶಕ್ಕೆ

Update: 2021-10-05 18:44 IST

ಮಂಗಳೂರು: ಮೋರ್ಗನ್ಸ್‌ಗೇಟ್ ನಲ್ಲಿ ನಡೆದ ಶೂಟೌಟ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ಉದ್ಯಮಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ಮಂಗಳೂರು ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ತಿಳಿಸಿದ್ದಾರೆ.

ನಗರದ ಮೋರ್ಗನ್ಸ್‌ಗೇಟ್ ಸಮೀಪ ವೈಷ್ಣವಿ ಕಾರ್ಗೊ ಸಂಸ್ಥೆಯನ್ನು ರಾಜೇಶ್ ಪ್ರಭು ಎಂಬವರು ನಡೆಸುತ್ತಿದ್ದು, ಉದ್ಯಮಿಯಲ್ಲಿ ಪರವಾನಿಗೆ ಪಡೆದ ಪಿಸ್ತೂಲ್ ಇದೆ ಎಂಬ ಮಾಹಿತಿ ಇದೆ. ಸುಮಾರು 3:30ರ ಸುಮಾರಿಗೆ ಘಟನೆ ನಡೆದಿದೆ. ರಾಜೇಶ್ ಮಧ್ಯಾಹ್ನ ಪಿಸ್ತೂಲ್ ಸಹಿತ ಸಂಸ್ಥೆಯ ಕಚೇರಿಗೆ ಬಂದಿದ್ದಾರೆ. ಕಚೇರಿ ಬಳಿ ಗೊಂದಲಮಯ ವಾತಾವರಣ ಏರ್ಪಟ್ಟ ವೇಳೆ ಉದ್ಯಮಿಯಿಂದ ಎರಡು ಸುತ್ತು ಗುಂಡು ಹಾರಾಟ ನಡೆಯುತ್ತದೆ. ಸ್ಥಳದಲ್ಲಿ ಎರಡು ಗುಂಡುಗಳ ಅವಶೇಷ ಪತ್ತೆಯಾಗಿವೆ ಎಂದು ಕಮಿಷನರ್ ತಿಳಿಸಿದ್ದಾರೆ.

ರಾಜೇಶ್ ಎಂಬವರಿಗೆ ಎಸೆಸೆಲ್ಸಿ ಓದುವ ಸುಧೀಂದ್ರ ಹೆಸರಿನ ಪುತ್ರನಿದ್ದಾನೆ. ರಾಜೇಶ್ ಹಾರಿಸಿದ ಗುಂಡಿನಿಂದ ಪುತ್ರನ ಎಡಕಣ್ಣಿನ ಭಾಗದಲ್ಲಿ ತಾಗಿಕೊಂಡು ಗುಂಡು ಹೋಗಿದೆ. ಸುಮಾರು 7-8 ಇಂಚಿನಷ್ಟು ತಲೆಭಾಗದಲ್ಲಿ ಹೊಕ್ಕಿದೆ. ಘಟನೆ ಬಗ್ಗೆ ಸ್ಪಷ್ಟ ಮಾಹಿತಿ ಇನ್ನು ಲಭ್ಯವಾಗಿಲ್ಲ. ಘಟನೆ ಬಗ್ಗೆ ಕೂಲಂಕಷವಾಗಿ ತನಿಖೆ ಕೈಗೊಳ್ಳಲಾಗುವುದು ಎಂದು ಮಾಹಿತಿ ನೀಡಿದರು.

ವೇತನಕ್ಕೆ ಸಂಬಂಧಪಟ್ಟಂತೆ ಗುಂಡು ಹಾರಾಟ ನಡೆದಿದೆಯೇ? ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್, ಹಣಕಾಸು ವಿಚಾರದಲ್ಲಿ ದುರ್ಘಟನೆ ಸಂಭವಿಸಿದೆ ಎಂಬ ಊಹಾಪೋಹ ಕೇಳಿಬಂದಿದೆ. ಈ ಬಗ್ಗೆ ತನಿಖೆ ನಡೆಸಿದ ನಂತರವೇ ಘಟನೆಗೆ ನಿರ್ದಿಷ್ಟ ಕಾರಣ ಬೆಳಕಿಗೆ ಬರಲಿದೆ. ಗುಂಡೇಟು ತಿಂದ ಬಾಲಕನ ಸ್ಥಿತಿ ಗಂಭೀರವಾಗಿದ್ದು, ಖಾಸಗಿ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಘಟನೆಯ ಬಗ್ಗೆ ಸ್ಪಷ್ಟತೆ ಇಲ್ಲದ ಕಾರಣ ಹತ್ತು ಹಲವು ಗಾಳಿಸುದ್ದಿಗಳು ಹರಡುತ್ತಿವೆ. ಹಾಗಾಗಿ ಘಟನಾ ಸ್ಥಳದ ಸುತ್ತಮುತ್ತಲಿನ ಸಿಸಿಟಿವಿ ಫುಟೇಜ್‌ಗಳನ್ನು ವಶಕ್ಕೆ ಪಡೆದು, ಪರಿಶೀಲನೆ ನಡೆಸಲಾಗುತ್ತಿದೆ ಎಂದು ಹೇಳಿದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News