2025ರ ವೇಳೆ ಮಂಗಳೂರು ನಗರದ ಚಿತ್ರಣವೇ ಬದಲು: ಶಾಸಕ ವೇದವ್ಯಾಸ ಕಾಮತ್
ಮಂಗಳೂರು, ಅ.5: ಮಂಗಳೂರು ನಗರದಲ್ಲಿ ಸುಮಾರು 3000 ಕೋಟಿ ರೂ. ವೆಚ್ಚದ ಕಾಮಗಾರಿಗಳು ಪ್ರಾರಂಭಗೊಂಡಿದ್ದು, ಎಲ್ಲವೂ 2025ರ ವೇಳೆಗೆ ಮಂಗಳೂರಿನ ಚಿತ್ರಣವೇ ಬದಲಾಗಲಿದೆ ಎಂದು ಶಾಸಕ ವೇದವ್ಯಾಸ ಕಾಮತ್ ಹೇಳಿದ್ದಾರೆ.
ದ.ಕ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಪ್ರೆಸ್‌ಕ್ಲಬ್‌ನಲ್ಲಿ ಮಂಗಳವಾರ ಆಯೋಜಿಸಲಾಗಿದ್ದ ಮಾಧ್ಯಮ ಸಂವಾದದಲ್ಲಿ ಅವರು ಮಾತನಾಡಿದರು.ಕೊರೋನದಂತಹ ಈ ಕ್ಲಿಷ್ಟಕರ ಪರಿಸ್ಥಿತಿಯ ಮಧ್ಯೆಯೂ ಮೀನುಗಾರಿಕಾ ಜೆಟ್ಟಿ ಸುಧಾರಣೆಗೆ 25 ಕೋಟಿ ರೂ. ಹಾಗೂ ಪಚ್ಚನಾಡಿಯಲ್ಲಿನ 10 ಲಕ್ಷ ಟನ್‌ನಷ್ಟು ಹಳೇ ತ್ಯಾಜ್ಯ ಗುಡ್ಡದ ವಿಲೇವಾರಿಗೆ 74 ಕೋಟಿ ರೂ. ಮೊತ್ತವನ್ನು ಮುಂಜೂರು ಮಾಡಿಸುವಲ್ಲಿ ಸಫಲವಾಗಿದೆ. ಮಂಗಳೂರು ನಾಗರಿಕರಿಗೆ ದಿನದ 24 ಗಂಟೆ ನೀರು ಪೂರೈಸುವ ಮಹತ್ವಾಕಾಂಕ್ಷೆಯ ಜಲಸಿರಿ ಯೋಜನೆಗಾಗಿ ಕಾರ್ಯ ನಡೆಯುತ್ತಿದೆ, ತುಂಬೆಯಿಂದ ಹೊಸ ಕೊಳವೆಮಾರ್ಗ ಹಾಕಲಾಗುವುದು, ಅಲ್ಲದೆ ನಗರದಾದ್ಯಂತ 20ರಷ್ಟು ಓವರ್‌ಹೆಡ್ ಟ್ಯಾಂಕ್ ನಿರ್ಮಾಣಗೊಳ್ಳಲಿದೆ, ಹೆಚ್ಚುವರಿ ನೀರಿನ ಮೂಲದ ಅಗತ್ಯವಿರುವುದರಿಂದ ಹರೇಕಳದ ನೂತನ ಡ್ಯಾಂನಿಂದಲೂ ನೀರು ಪಡೆಯಬೇಕಾಗಬಹುದು, ಯೋಜನೆ 2025ಕ್ಕೆ ಪೂರ್ಣಗೊಳ್ಳುವ ನಿರೀಕ್ಷೆ ಇದೆ.ಮಂಗಳೂರಿನಲ್ಲಿ ಫಿಲಂ ಸಿಟಿನಗರದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಸಾಕಷ್ಟು ಅವಕಾಶಗಳಿವೆ, ಅದಕ್ಕಾಗಿಯೇ ನೇತ್ರಾವತಿಯಲ್ಲಿರುವ ಎರಡು ಕುದ್ರುಗಳಲ್ಲಿ ಫಿಲಂ ಸಿಟಿ ನಿರ್ಮಿಸುವುದು ಮತ್ತು ಕುದ್ರುಗಳನ್ನು ಅಭಿವೃದ್ಧಿಗೊಳಿಸುವುದಕ್ಕಾಗಿ ಯೋಜನೆ ನನ್ನ ಕನಸಾಗಿದೆ. ಮೆರಿಟೈಂ ಮಂಡಳಿ ಅಥವಾ ಕೇಂದ್ರದ ನೆರವಿನಲ್ಲಿ ಇವುಗಳನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ಅವರು ಹೇಳಿದರು.
ಮೀನುಗಾರಿಕೆಗೆ ನೆರವಾಗಲು 6 ಕೋಟಿ ರೂ. ವೆಚ್ಚದಲ್ಲಿ ತೇಲುವ ಜೆಟ್ಟಿ ನಿರ್ಮಾಣ, ಮೂರನೇ ಹಂತದ ಜೆಟ್ಟಿ ವಿಸ್ತರಣೆಗೆ 25 ಕೋಟಿ ರೂ. ಮೊತ್ತವನ್ನು ಮಂಜೂರು ಮಾಡಿಸಿದ್ದು ಶೀಘ್ರ ಟೆಂಡರ್ ಕರೆಯಲಾಗುವುದು, ನಗರದಲ್ಲಿ ಮಳೆಗಾಲದಲ್ಲಿ ಕೃತಕ ನೆರೆ ಉಂಟಾಗುವುದನ್ನು ತಡೆಗಟ್ಟುವುದಕ್ಕಾಗಿ ರಾಜಕಾಲುವೆಯ ಇಕ್ಕೆಲಗಳಲ್ಲೂ ರಿಟೇನಿಂಗ್ ವಾಲ್ ನಿರ್ಮಿಸಲಾಗುವುದು, ಇದಕ್ಕಾಗಿ ರಾಜ್ಯ ಸರ್ಕಾರವನ್ನು ಒತ್ತಾಯಿಸಿ 35 ಕೋಟಿ ರೂ. ಮಂಜೂರಾತಿ ಪಡೆಯಲಾಗಿದೆ ಎಂದರು.
ಉರ್ವಾದಲ್ಲಿ ಕ್ರೀಡಾ ಸಂಕೀರ್ಣ ನಿರ್ಮಿಸಲು 10 ಕೋಟಿ ರೂ. ಮೊತ್ತವನ್ನು ನಿಗದಿಪಡಿಸಿದ್ದು ಸರ್ಕಾರದಿಂದ ನೆರವು ಸಿಗಲಿದೆ, ಇದಕ್ಕೆ ಶೀಘ್ರ ಶಿಲಾನ್ಯಾಸ ನೆರವೇರಿಸಲಾಗುವುದು ಎಂದು ವೇದವ್ಯಾಸ ಕಾಮತ್ ತಿಳಿಸಿದರು.ಹಿಂದಿನ ಶಾಸಕರು ಸ್ಪೋರ್ಟ್ಸ್ ಕಾಂಪ್ಲೆಕ್ಸ್ ನಿರ್ಮಿಸುವುದಾಗಿ ಹೇಳಿ ಗುದ್ದಲಿ ಪೂಜೆ ನೆರವೇರಿಸಿದ್ದರು. ಆದರೆ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯಿಂದ ಬಂದ 5 ಕೋಟಿ ರೂ. ಅನುದಾನ ಹಿಂದೆ ಹೋಗಿತ್ತು, ಈಗ ಅದನ್ನು ಮತ್ತೆ ತರಿಸುವ ಕೆಲಸವಾಗಿದೆ ಎಂದರು.ಎಮ್ಮೆಕೆರೆಯಲ್ಲಿ ಹಿಂದೆಯೇ ಈಜುಕೊಳ ನಿರ್ಮಾಣದ ಪ್ರಸ್ತಾಪ ಇತ್ತು, ನಾನು ಶಾಸಕನಾದಾಗ ಅಲ್ಲಿ ಅದನ್ನು ವಿರೋಧಿಸಿ ಪ್ರತಿಭಟನೆಗಳು ನಡೆದವು, ಆದರೆ ಅಲ್ಲಿನ ಸ್ಥಳೀಯ ಜನಪ್ರತಿನಿಧಿಗಳನ್ನು ಸೇರಿಸಿಕೊಂಡು ಜನರ ಮನವೊಲಿಸಿದ್ದು, ಈಜು ಕೊಳ ನಿರ್ಮಾಣ ಇನ್ನು ಮುಂದೆ ನಿರ್ವಿಘ್ನವಾಗಿ ನೆರವೇರಲಿದೆ ಎಂದೂ ತಿಳಿಸಿದರು.ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ, ಕಾರ್ಯದರ್ಶಿ ಇಬ್ರಾಹಿಂ ಉಪಸ್ಥಿತರಿದ್ದರು. ಆರ್.ಸಿ ಭಟ್ ಕಾರ್ಯಕ್ರಮ ನಿರೂಪಿಸಿದರು.