×
Ad

ಸಂವಿಧಾನ ಬದಲಾಯಿಸುತ್ತೇವೆ ಎನ್ನುತ್ತಿರುವವರು ದಲಿತ ವಿರೋಧಿಗಳು-ಸುಧೀರ್ ಕುಮಾರ್ ಮುರೋಳಿ

Update: 2021-10-05 22:07 IST

ಪುತ್ತೂರು :ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ರಚಿಸಿದ ದೇಶದ ಸಂವಿಧಾನವನ್ನು ಬದಲಾಯಿಸುತ್ತೇವೆ ಎನ್ನುವ ಬಿಜೆಪಿ ಮತ್ತು ಆರ್‍ಎಸ್‍ಎಸ್ ದಲಿತ ವಿರೋಧಿಗಳಾಗಿದ್ದು, ಎಲ್ಲರಿಗೂ ಸಮಾನ ಅವಕಾಶ ನೀಡಿದ ದೇಶದ ಸಂವಿಧಾನವನ್ನು ಬದಲಾಯಿಸಲು ಕಾಂಗ್ರೆಸ್ ಪಕ್ಷವು ಎಂದಿಗೂ ಅವಕಾಶ ನೀಡುವುದಿಲ್ಲ ಎಂದು ಕೆಪಿಸಿಸಿ ವಕ್ತಾರ ಸುಧೀರ್ ಕುಮಾರ್ ಮರೋಳಿ ಹೇಳಿದರು.

ಅವರು ಮಂಗಳವಾರ ಪುತ್ತೂರು ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಬ್ಲಾಕ್ ಪರಿಶಿಷ್ಟ ಜಾತಿ ಘಟಕದ ಪದಗ್ರಹಣ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು. 

ಹಸಿವನ್ನು ನೀಗಿಸುವ ರಾಜಕಾರಣ ಮಾಡಿರುವ ಏಕೈಕ ಪಕ್ಷ ಕಾಂಗ್ರೆಸ್ ಆಗಿದ್ದು, ಡಾ. ಅಂಬೇಡ್ಕರ್ ಅವರು ರಚಿಸಿದ ದೇಶದ ಸಂವಿಧಾನವನ್ನು ಯಥಾವತ್ತಾಗಿ ಅಂಗೀಕರಿಸಿ ಜಾರಿಗೊಳಿಸಿದ ಕೀರ್ತಿ ಕಾಂಗ್ರೆಸ್ ಪಕ್ಷಕ್ಕೆ ಸಲ್ಲುತ್ತದೆ. ಅಂದು ಡಾ. ಅಂಬೇಡ್ಕರ್ ಅವರಿಗೆ ಸಂವಿಧಾನ ರಚನೆಯ ಜವಾಬ್ದಾರಿ ನೀಡಿದರೆಂಬ ಕಾರಣಕ್ಕಾಗಿ ಆರ್‍ಎಸ್‍ಎಸ್ ಚಿಂತನೆಗಳ ಪ್ರರಿತನಾದ ಗೋಡ್ಸೆಯಿಂದ ಮಹಾತ್ಮ ಗಾಂಧೀಜಿ ಹತ್ಯೆ ನಡೆಯಿತು. ಅಂದು ಕಾಂಗ್ರೆಸನ್ನು ವಿರೋಧಿಸಿದ್ದ ಆರ್‍ಎಸ್‍ಎಸ್ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗದೆ ಬ್ರಿಟೀಷರೊಂದಿಗೆ ಸೇರಿಕೊಂಡು ಷಡ್ಯಂತ್ರ ನಡೆಸಿದ್ದರು. ಸಮಾಜದ ಕೆಳವರ್ಗದ ಜನರನ್ನು ಸಮಾಜದ ಮುಖ್ಯವಾಹಿನಿಗೆ ತಂದ ಕೀರ್ತಿ ಕಾಂಗ್ರೆಸ್ ಪಕ್ಷಕ್ಕೆ ಸಲ್ಲುತ್ತದೆ ಎಂದರು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಮಾಜಿ ಶಾಸಕಿ ಶಕುಂತಳಾ ಟಿ ಶೆಟ್ಟಿ ಮಾತನಾಡಿ ಒಂದೊಮ್ಮೆ ತುಳಿತಕ್ಕೆ ಒಳಗಾಗಿದ್ದ ಸಮಾಜದ ಮುಖ್ಯವಾಹಿನಿಯಿಂದ ದೂರವಾಗಿದ್ದ ಪರಿಶಿಷ್ಟ ಜಾತಿ ಜನಾಂಗದ ಏಳಿಗೆಗಾಗಿ ಕಾಂಗ್ರೆಸ್ ಶ್ರಮಿಸಿದೆ.ಮನೆಗಳಿಗೆ, ಹೋಟೆಲ್‍ಗಳಿಗೆ ಪ್ರವೇಶ ನೀಡದೆ  ಅಗೌರವ ನೀಡುತ್ತಿದ್ದ ವ್ಯವಸ್ಥೆಯನ್ನು ಕಾಂಗ್ರೆಸ್ ಬದಲಾಯಿಸಿದೆ ಎಂದರು.

ಕಾಂಗ್ರೆಸ್ ಪರಿಶಿಷ್ಟ ಜಾತಿ ಘಟಕದ ಜಿಲ್ಲಾಧ್ಯಕ್ಷ ಶೇಖರ ಕುಕ್ಕೇರಿ ಅಧ್ಯಕ್ಷತೆ ವಹಿಸಿದ್ದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಬಿ.ವಿಶ್ವನಾಥ ರೈ, ಪ್ರಧಾನ ಕಾರ್ಯದರ್ಶಿ ಅಮಳ ರಾಮಚಂದ್ರ, ಪರಿಶಿಷ್ಟ ಜಾತಿ ಘಟಕದ ನೂತನ ಅಧ್ಯಕ್ಷ ಕೇಶವ ಪಡೀಲ್, ಪಕ್ಷದ ಮುಖಂಡರಾದ ಡಾ. ರಘು ಬೆಳ್ಳಿಪ್ಪಾಡಿ, ಮಾಜಿ ಜಿಪಂ ಅಧ್ಯಕ್ಷ ಸೋಮನಾಥ ಉಪ್ಪಿನಂಗಡಿ, ಅಭಿಷೇಕ್ ಬೆಳ್ಳಿಪ್ಪಾಡಿ, ಐತ್ತಪ್ಪ ಪೇರಲ್ತಡ್ಕ, ಸೇಸಪ್ಪ ನೆಕ್ಕಿಲು ಮಾತನಾಡಿದರು.

ನಗರ ಕಾಂಗ್ರೆಸ್ ಅಧ್ಯಕ್ಷ ಎಚ್. ಮಹಮ್ಮದ್ ಆಲಿ, ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಪ್ರಸಾದ್ ಕೌಶಲ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

ರಾಮ ಮೇನಾಲ ಸ್ವಾಗತಿಸಿದರು. ಮುಖೇಶ್ ಕೆಮ್ಮಿಂಜೆ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News