ದ.ಕ. ಜಿಲ್ಲೆಯಲ್ಲಿ ಕಾಂಗ್ರೆಸ್ ಅಡಿಪಾಯ ಗಟ್ಟಿಯಾಗಿದೆ: ಡಿ.ಕೆ. ಶಿವಕುಮಾರ್
ಪುತ್ತೂರು: ಜಿಲ್ಲೆಯಲ್ಲಿ ಈ ಬಾರಿ ಕಾಂಗ್ರೆಸ್ ಪಕ್ಷಕ್ಕೆ ಸೋಲಾಗಿದೆ ಎಂಬ ಬಗ್ಗೆ ಕಾರ್ಯಕರ್ತರಿಗೆ ಯಾವುದೇ ನಿರಾಸೆ ಬೇಡ. ಜಿಲ್ಲೆಯಲ್ಲಿ ಕಾಂಗ್ರೆಸ್ ಅಡಿಪಾಯ ಗಟ್ಟಿಯಾಗಿದೆ. ಬೂತ್ ಮಟ್ಟದಲ್ಲಿ ಜನರ ಮನೆ ಮನೆಗೆ ತೆರಳಿ ಮತ್ತೆ ಕಾಂಗ್ರೆಸ್ ಪಕ್ಷವನ್ನು ಕಟ್ಟುವ ಕೆಲಸ ಮಾಡಿ. ಸಮೀಕ್ಷೆಯಂತೆ ಮುಂದಿನ ಚುನಾವಣೆಯಲ್ಲಿ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದರು.
ಅವರು ಮಂಗಳವಾರ ಸಂಜೆ ಪುತ್ತೂರು ಬ್ಲಾಕ್ ಕಾಂಗ್ರೆಸ್ ಕಚೇರಿಗೆ ಭೇಟಿ ನೀಡಿ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮತನಾಡಿದರು.
ಪಕ್ಷಗಳಲ್ಲಿ ನಾಯಕರು ಕಿತ್ತಾಟ ನಡೆಸುವುದು ಮತ್ತೆ ಒಂದಾಗುವುದು ಸಹಜ. ಅದಕ್ಕಾಗಿ ಕಾರ್ಯಕರ್ತರು ವಿಚಲಿತರಾಗಬೇಕಾಗಿಲ್ಲ. ಕಾಂಗ್ರೆಸ್‍ನಲ್ಲಿ ಎಂದೂ ಗುಂಪುಗಾರಿಕೆಗೆ ಅವಕಾಶಗಳಿಲ್ಲ. ಗುಂಪುಗಾರಿಕೆ ಮಾಡಲು ಪ್ರಯತ್ನಿಸಿದ್ದಲ್ಲಿ ಅಂತವರನ್ನು ಪಕ್ಷದಿಂದ ದೂರವಿಡಲಾ ಗುವುದು. ಕಾಂಗ್ರೆಸ್ ಕಾರ್ಯಕರ್ತರು ವ್ಯಕ್ತಿ ಪೂಜೆ ಬಿಟ್ಟು ಪಕ್ಷವನ್ನು ಪೂಜಿಸುವ ಕೆಲಸ ಮಾಡಬೇಕು ಎಂದರು.
ತಾನೂ ಓರ್ವ ತಳ ಮಟ್ಟದ ಕಾರ್ಯಕರ್ತನಾಗಿ ಕೆಲಸ ಮಾಡಿ ಈ ಸ್ಥಾನಕ್ಕೆ ಬಂದಿದ್ದೇನೆ. ಕಾರ್ಯಕರ್ತರಿಗೆ ನೀಡುವ ಗೌರವ ಮತ್ತು ಅವರ ಧ್ವನಿಗೆ ಬೆಲೆ ಬಲ ನೀಡುವುದರಿಂದ ಪಕ್ಷವು ಬೆಳೆಯುತ್ತದೆ. ಕಾರ್ಯಕರ್ತರ ಧ್ವನಿಯೇ ಅಧ್ಯಕ್ಷರ ಧ್ವನಿಯಾಗಬೇಕು ಎಂದು ನಂಬಿರುವ ನಾನು ಆ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದೇನೆ ಎಂದರು.
ಮಾಜಿ ಸಚಿವರಾದ ಬಿ. ರಮಾನಾಥ ರೈ, ಅಭಯಚಂದ್ರ ಜೈನ್, ಮಾಜಿ ಶಾಸಕಿ ಶಕುಂತಳಾ ಟಿ. ಶೆಟ್ಟಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ. ಹರೀಶ್ ಕುಮಾರ್, ಮುಖಂಡರಾದ ಮಿಥುನ್ ರೈ, ಪಿ.ವಿ. ಮೋಹನ್, ಹೇಮನಾಥ ಶೆಟ್ಟಿ, ಅನಿತಾ ಹೇಮನಾಥ ಶೆಟ್ಟಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಬಿ. ವಿಶ್ವನಾಥ ರೈ, ನಗರ ಕಾಂಗ್ರೆಸ್ ಅಧ್ಯಕ್ಷ ಎಚ್. ಮಹಮ್ಮದ್ ಆಲಿ, ವಿಟ್ಲ- ಉಪ್ಪಿನಂಗಡಿ ಬ್ಲಾಕ್ ಅಧ್ಯಕ್ಷ ಡಾ. ರಾಜಾರಾಂ ಕೆ.ಬಿ. ಮತ್ತಿತರರು ಉಪಸ್ಥಿತರಿದ್ದರು.