×
Ad

ತಾಲಿಬಾನ್ ಗಳಿಂದ ಹಝಾರಾ ಸಮುದಾಯದ 13 ಸದಸ್ಯರ ಹತ್ಯೆ: ವರದಿ

Update: 2021-10-05 22:30 IST

ಕಾಬೂಲ್, ಅ.5: ಅಫ್ಗಾನಿಸ್ತಾನದ ಮೇಲೆ ನಿಯಂತ್ರಣ ಸಾಧಿಸಿದ ಕೆಲ ದಿನಗಳಲ್ಲೇ ತಾಲಿಬಾನ್ಗಳು ಕೇಂದ್ರ ಪ್ರಾಂತ್ಯದ ದೇಕುಂದಿಯಲ್ಲಿ 17 ವರ್ಷದ ಯುವತಿಯ ಸಹಿತ ಹಝಾರಾ ಜನಾಂಗೀಯ ಗುಂಪಿನ 13 ಸದಸ್ಯರನ್ನು ಹತ್ಯೆಗೈದಿದ್ದಾರೆ ಎಂದು ಆ್ಯಮ್ನೆಸ್ಟಿ ಇಂಟರ್‌ ನ್ಯಾಷನಲ್ನ ನೂತನ ವರದಿ ತಿಳಿಸಿದೆ.

ಆಗಸ್ಟ್ 30ರಂದು 300 ತಾಲಿಬಾನ್ ಹೋರಾಟಗಾರರ ತಂಡವೊಂದು ಖಿದ್ರ್ ಜಿಲ್ಲೆಯನ್ನು ಪ್ರವೇಶಿಸಿ ಅಫ್ಗಾನ್ ರಾಷ್ಟ್ರೀಯ ಭದ್ರತಾ ಪಡೆಯ 11 ಮಾಜಿ ಸದಸ್ಯರನ್ನು ಹತ್ಯೆಗೈದಿದೆ. ಇವರಲ್ಲಿ 9 ಮಂದಿಯನ್ನು ಸಮೀಪದ ನದಿತೀರಕ್ಕೆ ಕರೆದೊಯ್ದು ನೇಣಿಗೇರಿಸಲಾಗಿದೆ . ಇವರೆಲ್ಲಾ ಹಝಾರಾ ಸಮುದಾಯದವರು ಮತ್ತು ತಾಲಿಬಾನ್ನ ಪ್ರಥಮ ಆಡಳಿತದ ಅವಧಿ(1996ರಿಂದ 2001)ಯಲ್ಲಿ ತಾಲಿಬಾನ್ಗಳಿಂದ ಕಿರುಕುಳಕ್ಕೆ ಒಳಗಾಗಿದ್ದವರು. ಇದೇ ದಿನ ಅಫ್ಗಾನ್ ಪಡೆ-ತಾಲಿಬಾನ್ ನಡುವಿನ ಗುಂಡಿನ ಚಕಮಕಿಯಲ್ಲಿ ಮಾಸುಮ ಎಂಬ ಯುವತಿ ಹಾಗೂ ಇತ್ತೀಚೆಗಷ್ಟೇ ವಿವಾಹವಾಗಿದ್ದ ಫಯಾಝ್ ಎಂಬ ಯುವಕ ಮೃತಪಟ್ಟಿದ್ದರು . 

ಜುಲೈ ತಿಂಗಳಿನಲ್ಲಿ ಘಜ್ನಿ ಪ್ರಾಂತ್ಯದಲ್ಲಿ ತಾಲಿಬಾನ್ಗಳು ಕನಿಷ್ಟ 9 ಹಝಾರ ಸದಸ್ಯರನ್ನು ಹತ್ಯೆ ಮಾಡಿದ್ದಾರೆ. ಅಫ್ಗಾನಿಸ್ತಾನದ ಶಿಯಾ ಜನಸಂಖ್ಯೆಯಲ್ಲಿ ಬಹುಸಂಖ್ಯಾತರಾಗಿರುವ ಹಝಾರಾ ಸಮುದಾಯದವರನ್ನು ತಾಲಿಬಾನ್ ಹಾಗೂ ಐಸಿಸ್ನ ಸಹಸಂಘಟನೆ ‘ಇಸ್ಲಾಮಿಕ್ ಸ್ಟೇಟ್ ಖೊರಾಸನ್ ಪ್ರೊವಿನ್ಸ್’ ಗುರಿಯಾಗಿಸಿಕೊಂಡಿದೆ ಎಂದು ಮಂಗಳವಾ ಬಿಡುಗಡೆಯಾದ ವರದಿ ಹೇಳಿದೆ.

ಆ್ಯಮ್ನೆಸ್ಟಿ ವರದಿಯ ಮಾಹಿತಿಯನ್ನು ದೃಢೀಕರಿಸಿರುವ ಮಾಜಿ ಸಂಸದೆ ರಿಹಾನಾ ಆಝಾದ್, ಆಗಸ್ಟ್ 30ರಂದು ತಾಲಿಬಾನ್ ಅಮಾನವೀಯ ಸಾಮೂಹಿಕ ಹತ್ಯಾಕಾಂಡ ನಡೆಸಿದೆ . ಸೇನೆಯ ಮಾಜಿ ಅಧಿಕಾರಿಗಳು ಅಥವಾ ಸರಕಾರಿ ಸಿಬಂದಿಗಳಿಗೆ ಕ್ಷಮಾದಾನ ನೀಡಲಾಗುತ್ತದೆ ಎಂಬ ತಾಲಿಬಾನ್ಗಳ ಹೇಳಿಕೆಯನ್ನು ಇದು ಸುಳ್ಳಾಗಿಸಿದೆ ಎಂದಿದ್ದಾರೆ.
ಈ ಭೀಭತ್ಸ ಹತ್ಯೆಗಳು, ತಾಲಿಬಾನ್ಗಳು ಈ ಹಿಂದಿನ ಆಡಳಿತದ ಸಂದರ್ಭ ನಡೆಸಿದ ಭಯಾನಕ ದೌರ್ಜನ್ಯಗಳು ಈ ಬಾರಿಯ ಆಡಳಿತದಲ್ಲೂ ಮರುಕಳಿಸುವ ಸೂಚನೆಯಾಗಿದೆ ಎಂದು ಆ್ಯಮ್ನೆಸ್ಟಿ ಇಂಟರ್ನ್ಯಾಷನಲ್ನ ಪ್ರಧಾನ ಕಾರ್ಯದರ್ಶಿ ಆ್ಯಗ್ನೆಸ್ ಕ್ಯಾಲಮರ್ಡ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News