2022 ರಿಂದ ಹೊಸ ಮಾದರಿ ನೀಟ್ ಪರೀಕ್ಷೆ ಜಾರಿಗೆ: ಸುಪ್ರೀಂಕೋರ್ಟ್ ತರಾಟೆ ನಂತರ ಕೇಂದ್ರದ ನಿಲುವು ಬದಲು

Update: 2021-10-06 07:31 GMT

ಹೊಸದಿಲ್ಲಿ: 2021 ರ ನೀಟ್-ಪಿಜಿ ಸೂಪರ್‌ಸ್ಪೆಷಾಲಿಟಿ ಪರೀಕ್ಷೆಯು ಹಳೆಯ ಮಾದರಿಗೆ ಅನುಗುಣವಾಗಿ ನಡೆಯಲಿದ್ದು, ಹೊಸ ಮಾದರಿ ಪರೀಕ್ಷೆಯನ್ನು 2022/23 ಶೈಕ್ಷಣಿಕ ವರ್ಷದಿಂದಲೇ ಜಾರಿಗೆ ತರಲಾಗುವುದು ಎಂದು ಕೇಂದ್ರ ಸರಕಾರ ಬುಧವಾರ ಬೆಳಿಗ್ಗೆ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ.

ಸರಕಾರವು ಪರೀಕ್ಷಾ ಮಾದರಿಗಳನ್ನು ಬದಲಾಯಿಸಲು ಆತುರ ತೋರುತ್ತಿದೆ. ಯುವ ಹಾಗೂ  ಮಹತ್ವಾಕಾಂಕ್ಷಿ ವೈದ್ಯರನ್ನು "ಅಧಿಕಾರದ ಆಟದಲ್ಲಿ ಫುಟ್ಬಾಲ್" ನಂತೆ ಪರಿಗಣಿಸಿದೆ ಎಂದು ಸುಪ್ರೀಂಕೋರ್ಟ್  ಟೀಕಿಸಿದ ನಂತರ ಕೇಂದ್ರ ಈ ನಿರ್ಧಾರ ತಾಳಿದೆ.

"ನಿಮ್ಮ ಅವಲೋಕನಗಳಿಗೆ ಹಾಗೂ  ವಿದ್ಯಾರ್ಥಿಗಳ ಹಿತದೃಷ್ಟಿಯಿಂದ, ಕೇಂದ್ರವು ಪರಿಷ್ಕೃತ ಯೋಜನೆಯನ್ನು 2022 ರಿಂದ ಜಾರಿಗೆ ತರಲು ನಿರ್ಧರಿಸಿದೆ. ಪ್ರಸ್ತುತ ಪರೀಕ್ಷೆಯು 2020 ರ ಯೋಜನೆಯನ್ನು ಆಧರಿಸಿ ನಡೆಯಲಿದೆ" ಎಂದು ಹೆಚ್ಚುವರಿ ಸಾಲಿಸಿಟರ್ ಜನರಲ್ ಐಶ್ವರ್ಯ ಭಾಟಿ ನ್ಯಾಯಾಲಯಕ್ಕೆ ತಿಳಿಸಿದರು.

ಪರೀಕ್ಷೆಯು ಮೂಲತಃ ಮುಂದಿನ ತಿಂಗಳಿಗೆ ನಿಗದಿಯಾಗಿತ್ತು.  ಆದರೆ ನಿನ್ನೆ ಸರಕಾರವು ಬದಲಾದ ಮಾದರಿಗೆ ವಿದ್ಯಾರ್ಥಿಗಳು ತಯಾರಿ ನಡೆಸಲು ಹೆಚ್ಚಿನ ಸಮಯವನ್ನು ನೀಡಲು  2022 ರ ಜನವರಿಯವರೆಗೆ ಮುಂದೂಡಲು ಮುಂದಾಯಿತು.

ಪರೀಕ್ಷೆಯ ಅಂತಿಮ ದಿನಾಂಕ ನಿರ್ಧರಿಸಲು ನ್ಯಾಯಾಲಯವು ಇಂದು ಸರಕಾರಕ್ಕೆ ಸ್ವಾತಂತ್ರ್ಯ ನೀಡಿದೆ.

ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ನೇತೃತ್ವದ ಸುಪ್ರೀಂ ಕೋರ್ಟ್ ನ್ಯಾಯಪೀಠವು ಪರೀಕ್ಷಾ ಮಾದರಿಯ ಬಗ್ಗೆ ಸರಕಾರದ ಯು-ಟರ್ನ್ ಕುರಿತು ತೃಪ್ತಿ ವ್ಯಕ್ತಪಡಿಸಿತು ಹಾಗೂ ಇದು ‘ಅತ್ಯಂತ ನ್ಯಾಯಯುತ’ ಎಂದು ಘೋಷಿಸಿತು.

ಮಂಗಳವಾರ ನ್ಯಾಯಾಲಯವು ಪರೀಕ್ಷಾ ಮಾದರಿಯ ಬದಲಾವಣೆಯ ಬಗ್ಗೆ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News