ಪ್ರಚೋದನಕಾರಿ ಭಾಷಣ: ಚೈತ್ರಾ ಕುಂದಾಪುರ ವಿರುದ್ಧ ದೂರು ದಾಖಲು
ಮಂಗಳೂರು, ಅ.6: ಬಜರಂಗದಳ ದುರ್ಗಾವಾಹಿನಿ ಸುರತ್ಕಲ್ ಪ್ರಖಂಡದಿಂದ 'ಲವ್ ಜಿಹಾದ್ ಮತ್ತು ಮತಾಂತರ' ವಿರುದ್ಧ ಹಿಂದೂ ಸಮಾಜವನ್ನು ಜಾಗೃತಗೊಳಿಸುವ ಹೆಸರಿನಲ್ಲಿ ಸುರತ್ಕಲ್‌ನಲ್ಲಿ ಅ.4ರಂದು ನಡೆದ ಜನಜಾಗೃತಿ ಸಭೆಯಲ್ಲಿ ಚೈತ್ರಾ ಕುಂದಾಪುರ ಪ್ರಚೋದನಕಾರಿ ಭಾಷಣ ಮಾಡಿದ್ದು, ಬಂಟ್ವಾಳ ತಾಲೂಕಿನ ಶಂಭೂರಿನ ಬೊಂಡಾಲ ಚಿತ್ತರಂಜನ್ ಶೆಟ್ಟಿ ಕಾನೂನು ಕ್ರಮಕ್ಕೆ ಆಗ್ರಹಿಸಿ ಸುರತ್ಕಲ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಸುರತ್ಕಲ್ ಠಾಣೆ ವ್ಯಾಪ್ತಿಯಲ್ಲಿ ಹಮ್ಮಿಕೊಂಡಿದ್ದ ಸಭೆಯಲ್ಲಿ ಚೈತ್ರಾ ಕುಂದಾಪುರ ಅಶ್ಲೀಲ, ಕಾನೂನುಬಾಹಿರ ಪದಗಳನ್ನು ಬಳಸಿ ಪ್ರಚೋದನಕಾರಿ ಭಾಷಣ ಮಾಡಿರುವುದು ಮಾಧ್ಯಮಗಳು ಸಹಿತ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸುದ್ದಿಯಾಗಿತ್ತು. ಭಾಷಣ ಸಮಾಜದ ಸ್ವಾಸ್ಥವನ್ನು ಕದಡುವ, ಮತೀಯ ಘರ್ಷಣೆಗೆ ಕಾರಣವಾಗುವ ಕಾನೂನು ಸುವ್ಯವಸ್ಥೆಗೆ ಭಂಗ ಉಂಟಾಗುವ ಸಾಧ್ಯತೆ ಇದೆ. ಚೈತ್ರಾ ಕುಂದಾಪುರ ಹಾಗೂ ಕಾರ್ಯಕ್ರಮ ಆಯೋಜಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಚಿತ್ತರಂಜನ್ ಶೆಟ್ಟಿ ದೂರಿನಲ್ಲಿ ತಿಳಿಸಿದ್ದಾರೆ.
ಚೈತ್ರಾ ಕುಂದಾಪುರ ಭಾಷಣದಲ್ಲಿ ಒಂದು ಕೋಮಿನ ಜನರನ್ನು ಕಾನೂನುಬಾಹಿರ ಪದಗಳನ್ನು ಬಳಸಿ ಅವಮಾನಿಸಿದ್ದಾರೆ. ಅಲ್ಲದೆ, ಆ ಕೋಮಿನ ವಿರುದ್ಧ ಜನತೆಯನ್ನು ಎತ್ತಿಕಟ್ಟುವ, ದ್ವೇಷ ಹುಟ್ಟಿಸುವ ರೀತಿಯಲ್ಲಿ ಉದ್ರೇಕಕಾರಿ ಪದಗಳನ್ನು ಬಳಸಿದ್ದಾರೆ. ಈಕೆಯ ಭಾಷಣದಿಂದ ಪ್ರಚೋದನೆಗೆ ಒಳಗಾಗಿ ಕ್ರಿಯೆ ಪ್ರಕ್ರಿಯೆಗಳು ಉಂಟಾಗುವ, ಕೋಮು ಘರ್ಷಣೆಯ ಭೀತಿ ಎದುರಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಸಾಮಾಜಿಕ ಜಾಲತಾಣದಲ್ಲಿ ಪರಸ್ಪರ ವಾಗ್ವಾದಗಳು ನಡೆಯುತ್ತಿವೆ. ಹಾಗೆಯೇ ಈಕೆಯ ಭಾಷಣದಲ್ಲಿ ತುಳುನಾಡಿನ ಕಾರಣಿಕ ಪುರಷರು, ಆರಾಧ್ಯ ದೈವಗಳಾದ ಕೋಟಿ ಚೆನ್ನಯರನ್ನು ದುರುಪಯೋಗ ಪಡಿಸಿ, ತುಳುವರ ಧಾರ್ಮಿಕ ನಂಬಿಕೆಗೆ ಘಾಸಿಯುಂಟು ಮಾಡಿದ್ದಾಳೆ. ಕೋಟಿ ಚೆನ್ನಯರು ಹಿಡಿಯುವ ಸುರಿಯ ಎಂಬ ಪವಿತ್ರ ಆಯುಧವನ್ನು ರೌಡಿಗಳು, ಕೋಮು ಘರ್ಷಣೆಯಲ್ಲಿ ಪುಂಡರು ಬಳಸುವ ತಲವಾರಿಗೆ ಹೋಲಿಸಿರುವುದು ಈಕೆಯ ಭಾಷಣದಲ್ಲಿ ದಾಖಲಾಗಿದೆ. ಇದು ಅತ್ಯಂತ ಆಘಾತಕಾರಿ, ಧಾರ್ಮಿಕ ನಂಬಿಕೆಗೆ ಘಾಸಿ ಉಂಟು ಮಾಡುವ ಪ್ರಯತ್ನ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.
ಇದೇ ಸಭೆಯಲ್ಲಿ ಬಂಟ ಸಮುದಾಯಕ್ಕೆ ಸೇರಿದ ಕಾಂಗ್ರೆಸ್ ಪಕ್ಷದ ಮಾಜಿ ಸಚಿವರೊಬ್ಬರ ಮಗಳಿಗೆ ಮುಸ್ಲಿಂ ಯುವಕನೊಂದಿಗೆ ಪ್ರೇಮ ಸಂಬಂಧವಿದೆ. ಆತನೊಂದಿಗೆ ಮದುವೆಗೆ ಹಠ ಹಿಡಿದಿದ್ದಾಳೆ ಎಂದು ಹೇಳಿರುವುದು ವರದಿಯಾಗಿದೆ. ಇದು ರಾಜಕೀಯ ಪಕ್ಷಗಳ ಕಾರ್ಯಕರ್ತರ ನಡುವೆ ಸಂಘರ್ಷ ಉಂಟಾಗುವ ಸನ್ನಿವೇಶಕ್ಕೆ ಎಡೆ ಮಾಡಿಕೊಡಬಹುದು. ಇದು ಕಾಂಗ್ರೆಸ್, ಬಂಟ ಸಮುದಾಯದ ಘನತೆಗೆ ಏಕಕಾಲದಲ್ಲಿ ಸಾರ್ವಜನಿಕವಾಗಿ ಕುಂಟು ಉಂಟು ಮಾಡುವಂತಿದೆ. ಪ್ರಚೋದನಕಾರಿ ಹೇಳಿಕೆ ನೀಡಿದ ಚೈತ್ರಾ ಕುಂದಾಪುರ ಹಾಗೂ ಸಂಘಟಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಅವರು ದೂರಿನಲ್ಲಿ ಒತ್ತಾಯಿಸಿದ್ದಾರೆ.
ಸುರತ್ಕಲ್‌ನಲ್ಲಿ ಬಜರಂಗ ದಳ ಹಮ್ಮಿಕೊಂಡಿದ್ದ ಅನೈತಿಕ ಪೊಲೀಸ್ ಗಿರಿ ಪರವಾದ ಪ್ರತಿಭಟನಾ ಸಭೆಯಲ್ಲಿ ಚೈತ್ರಾ ಕುಂದಾಪುರ ಎಂಬವರು ಮಾಡಿದ ಅತ್ಯಂತ ಕೆಟ್ಟ, ಸಾಮಾಜಿಕ ಸ್ವಾಸ್ಥ ಕದಡುವ ದ್ವೇಷಪೂರಿತ ಭಾಷಣದ ವಿರುದ್ಧ ಸುರತ್ಕಲ್ ಠಾಣೆಯಲ್ಲಿ ದೂರು ದಾಖಲಾಗಿದೆ. ಪೊಲೀಸದು ಇನ್ನು ತಡ ಮಾಡಬಾರದು. ಎಫ್‌ಐಆರ್ ದಾಖಲಿಸಿ ಬಂಧನ ಪ್ರಕ್ರಿಯೆ ಆರಂಭಿಸಬೇಕು. ಶಾಸಕ ಭರತ್ ಶೆಟ್ಟಿಯವರ ಒತ್ತಡಕ್ಕೆ ಬಲಿಯಾಗಬಾರದು. ಪೊಲೀಸ್ ಇಲಾಖೆಯ ಗೌರವ ಎತ್ತಿ ಹಿಡಿಯಬೇಕು.
- ಮುನೀರ್ ಕಾಟಿಪಳ್ಳ, ಡಿವೈಎಫ್‌ಐ ರಾಜ್ಯಾಧ್ಯಕ್ಷ