ದಸರಾ, ನವರಾತ್ರಿ ಹಬ್ಬದ ವೇಳೆ ಕೋವಿಡ್ ಮಾರ್ಗಸೂಚಿ ಪಾಲಿಸಿ: ಜಿಲ್ಲಾಧಿಕಾರಿ ಕೂರ್ಮಾ ರಾವ್ ಆದೇಶ
ಉಡುಪಿ, ಅ.6: ದಸರಾ ಹಾಗೂ ನವರಾತ್ರಿ ಹಬ್ಬಗಳ ಆಚರಣೆಯನ್ನು ಕೋವಿಡ್ ಪಾಸಿಟಿವಿಟಿ ದರದ ಏರಿಕೆಗೆ ಕಾರಣವಾಗದಂತೆ ಅತ್ಯಂತ ಸರಳವಾಗಿ ಹಾಗೂ ಭಕ್ತಿಪೂರ್ವಕವಾಗಿ ಕೋವಿಡ್-19 ಸಮುಚಿತ ವರ್ತನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಿಕೊಂಡು ಆಚರಿಸುವಂತೆ ಜಿಲ್ಲಾಧಿಕಾರಿ ಕೂರ್ಮಾ ರಾವ್ ಎಂ. ಆದೇಶ ಹೊರಡಿಸಿದ್ದಾರೆ.
ಅ.7ರಿಂದ 15ರವರೆಗೆ ನಡೆಯುವ ದಸರಾ ಆಚರಣೆಯ ಕಾರ್ಯಕ್ರಮಗಳಲ್ಲಿ 400ಕ್ಕಿಂತ ಹೆಚ್ಚು ಜನರು ಒಮ್ಮೆಗೆ ಸೇರುವಂತಿಲ್ಲ ಹಾಗೂ ಸುರಕ್ಷತಾ ಅಂತರವನ್ನು ಕಡ್ಡಾಯವಾಗಿ ಪಾಲಿಸಬೇಕು. ಹಾಗೂ ದಸರಾ ಆಚರಣೆಯಲ್ಲಿ ಸಾಮಾಜಿಕ ಅಂತರವಿಲ್ಲದೇ ನಡೆಸಲಾಗುವ ಎಲ್ಲಾ ಕಾರ್ಯಕ್ರಮಗಳನ್ನು ನಿಷೇಧಿಸಲಾಗಿದೆ ಎಂದವರು ಆದೇಶದಲ್ಲಿ ತಿಳಿಸಿದ್ದಾರೆ.
ದೇವಸ್ಥಾನ ಹಾಗೂ ವಿವಿಧ ಕಾರ್ಯಕ್ರಮಗಳಲ್ಲಿ ಕರ್ತವ್ಯ ನಿರ್ವಹಿಸುವ ಎಲ್ಲಾ ವರ್ಗದವರು ಕೋವಿಡ್ ಸಮುಚಿತ ವರ್ತನೆಗಳನ್ನು ಕಡ್ಡಾಯ ವಾಗಿ ಪಾಲಿಸಬೇಕು. ಕಾರ್ಯಕ್ರಮದ ಆಯೋಜಕರು ಹಾಗೂ ದೇವಸ್ಥಾನಗಳ ಆಡಳಿತ ವರ್ಗ ಕಾರ್ಯಕ್ರಮ ನಡೆಯುವಲ್ಲಿ ಸ್ಯಾನಟೈಸರ್, ಮಾಸ್ಕ್ ಬಳಕೆ ಹಾಗೂ ಸುರಕ್ಷತಾ ಅಂತರದ ಪಾಲನೆಗೆ ಕ್ರಮಕೈಗೊಳ್ಳಬೇಕು.
ಕೋವಿಡ್-19 ಸಾಂಕ್ರಾಮಿಕ ಸೋಂಕು ಹರಡುವಿಕೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ರಾಷ್ಟ್ರೀಯ ನಿರ್ದೇಶನಗಳನ್ನು ಹಾಗೂ ರಾಜ್ಯ ಸರಕಾರ ಹೊರಡಿಸಿರುವ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಇದರೊಂದಿಗೆ ಸಾರ್ವಜನಿಕ ಆರೋಗ್ಯ ದೃಷ್ಟಿಯಿಂದ ಆರೋಗ್ಯ ಇಲಾಖೆ, ಪೊಲೀಸ್ ಇಲಾಖೆ, ಅಗ್ನಿಶಾಮಕ ಇಲಾಖೆ, ಜಿಲ್ಲಾಡಳಿತ ಹಾಗೂ ಸ್ಥಳೀಯ ಸಂಸ್ಥೆ-ಪ್ರಾಧಿಕಾರಗಳಿಂದ ಹೊರಡಿ ಸಲಾಗುವ ಎಲ್ಲಾ ಆದೇಶ, ನಿರ್ದೇಶನ ಹಾಗೂ ಸೂಚನೆಗಳನ್ನೂ ಕಡ್ಡಾಯವಾಗಿ ಪಾಲಿಸಬೇಕು ಎಂದು ಜಿಲ್ಲಾಧಿಕಾರಿಗಳು ಆದೇಶದಲ್ಲಿ ತಿಳಿಸಿದ್ದಾರೆ.