2022ರ ಎಪ್ರಿಲ್ ನಿಂದ ವಾಹನ ಗುಜರಿ ನೀತಿ ಜಾರಿ: ಹಳೆ ವಾಹನಗಳ ನವೀಕರಣ, ಫಿಟ್ನೆಸ್ ಗೆ ದುಬಾರಿ ಶುಲ್ಕ

Update: 2021-10-06 16:29 GMT

ಸಾಂದರ್ಭಿಕ ಚಿತ್ರ

ಹೊಸದಿಲ್ಲಿ,ಸೆ.6: ವಾಹನ ಗುಜರಿ ನೀತಿಗೆ ಸಂಬಂಧಪಟ್ಟಂತೆ, 15 ವರ್ಷಕ್ಕಿಂತ ಹಳೆಯದಾದ ವಾಹನಗಳ ಬಳಕೆಯನ್ನು ಸಾರ್ವಜನಿಕರು ಕೈಬಿಡುವಂತೆ ಮಾಡಲು ಪ್ರೋತ್ಸಾಹಕಗಳ ಪಟ್ಟಿಯೊಂದನ್ನು ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವಾಲಯವು ಮಂಗಳವಾರ ಬಿಡುಗಡೆಗೊಳಿಸಿದೆ.

ಗುಜರಿಗೆ ಹಾಕಲಾದ ಹಳೆಯ ವಾಹನಕ್ಕೆ ನೋಂದಾಯಿತ ವಾಹನ ಗುಜರಿ ಘಟಕದಿಂದ ಠೇವಣಿ ಪ್ರಮಾಣ ಪತ್ರ ಪ್ರಾಧಿಕಾರ (ಸಿಓಡಿ)ವನ್ನು ಹಾಜರುಪಡಿಸಿದಲ್ಲಿ ನೂತನವಾಗಿ ಖರೀದಿಸಲಾದ ವಾಹನದ ನೋಂದಣಿ ಪ್ರಮಾಣಪತ್ರಕ್ಕಾಗಿ ಪಡೆಯಲಾಗುವ ಶುಲ್ಕವನ್ನು ರದ್ದುಪಡಿಸಲಾಗುವುದು’’ ಎಂದು ಸಚಿವಾಲಯದ ಪತ್ರಿಕಾ ಹೇಳಿಕೆಯು ತಿಳಿಸಿದೆ.

 ನೂತನ ವಾಹನ ಗುಜರಿ ನೀತಿಯು 2022ರ ಎಪ್ರಿಲ್ನಿಂದ ಜಾರಿಗೆ ಬರಲಿದೆ ಎಂದು ಸಚಿವಾಲಯದ ಅಧಿಸೂಚನೆ ತಿಳಿಸಿದೆ.

15 ವರ್ಷಕ್ಕಿಂತ ಹಳೆಯದಾದ ವಾಹನದ ಬಳಕೆಯನ್ನು  ನಿರುತ್ತೇಜಿಸಲು ಸಾರಿಗೆ ಹಾಗೂ ಹೆದ್ದಾರಿ ಸಚಿವಾಲಯವು ಕೈಗೊಂಡಿರುವ ಕ್ರಮಗಳು ಹೀಗಿವೆ. (1). 15 ವರ್ಷಗಳಿಗಿಂತಲೂ ಅಧಿಕ ಹಳೆಯದಾದ ಮೋಟಾರು ವಾಹನಗಳ ಫಿಟ್ನೆಸ್ ಪರೀಕ್ಷೆಯನ್ನು ನಡೆಸಲು ಹಾಗೂ ಫಿಟ್ನೆಸ್ ಪ್ರಮಾಣಪತ್ರ ಪುನರ್ನವೀಕರಣದ ಶುಲ್ಕವನ್ನು ಹೆಚ್ಚಿಸಲಾಗುವುದು. (2.). ಹದಿನೈದು ವರ್ಷಗಳಿಗಿಂತ ಹಳೆಯದಾದ ಸಾರಿಗೆ (ಟ್ರಾನ್ಸ್ಪೋರ್ಟ್) ವಾಹನಗಳ ಫಿಟ್ನೆಸ್ ಪ್ರಮಾಣಪತ್ರದ ಶುಲ್ಕವನ್ನು ಹೆಚ್ಚಿಸಲಾಗುವುದು. (3). 15 ವರ್ಷಗಳಿಗಿಂತಲೂ ಹೆಚ್ಚು ಹಳೆಯದಾದ ಖಾಸಗಿ ವಾಹನಗಳು (ಸಾರಿಗೇತರ ವಾಹನಗಳು)ಮೇಲಿನ ನೋಂದಣಿ ನವೀಕರಣ ಶುಲ್ಕದ ಹೆಚ್ಚಳ.


ಕೇಂದ್ರ ಸಾರಿಗೆ ಹಾಗೂ ಹೆದ್ದಾರಿ ಸಚಿವಾಲಯದ ಅಧಿಸೂಚನೆಯ ಪ್ರಕಾರ 15 ವರ್ಷಕ್ಕಿಂತ ಅಧಿಕ ಹಳೆಯದಾದ ಕಾರಿನ ನೋಂದಣಿಯ ನವೀಕರಣ ಶುಲ್ಕವನ್ನು ಈಗ ಇರುವ 600 ರೂ.ಗಳಿಂದ 5 ಸಾವಿರ ರೂ.ಗೆ ಏರಿಕೆ ಮಾಡಲಾಗುವುದು.


 ಅದೇ ರೀತಿ ಹಳೆಯ ಬೈಕ್ಗಳ ನೋಂದಣಿಯ ನವೀಕರಣ ಶುಲ್ಕವನ್ನು ಈಗ ಇರುವ 300 ರೂ.ನಿಂದ 1 ಸಾವಿರ ರೂ.ಗೆ ಹೆಚ್ಚಿಸಲಾಗುವುದು. ಬಸ್ ಅಥವಾ ಟ್ರಕ್ಗಳ ಫಿಟ್ನೆಸ್ ನವೀಕರಣ ಪ್ರಮಾಣ ಪತ್ರಕ್ಕೆ ವಿಧಿಸುವ ಶುಲ್ಕವನ್ನು 1500 ರೂ.ನಿಂದ 12,500 ರೂ.ಗೆ ಏರಿಸಲಾಗುವುದು.


ಹದಿನೈದು ವರ್ಷಕ್ಕಿಂತ ಹಳೆಯದಾದ ವಾಹನಗಳ ನವೀಕರಣದಲ್ಲಿ ಯಾವುದೇ ವಿಳಂಬವಾದಲ್ಲಿ ಖಾಸಗಿ ವಾಹನಗಳಿಗೆ ಮಾಸಿಕವಾಗಿ 300 ರೂ. ಹಾಗೂ ವಾಣಿಜ್ಯ ವಾಹನಗಳಿಗೆ 500 ರೂ. ದಂಡ ವಿಧಿಸಲಾಗುವುದು. ಇದೇ ರೀತಿ ವಾಣಿಜ್ಯ ವಾಹನಗಳ ಫಿಟ್ನೆಸ್ ಪ್ರಮಾಣಪತ್ರ ಪಡೆಯುವಲ್ಲಿ ವಿಳಂಬವಾದಲ್ಲಿ ದಿನಕ್ಕೆ 50 ರೂ.ನಂತೆ ದಂಡ ವಿಧಿಸಲಾಗುವುದು.


 ಜನರು ಹಳೆಯ ವಾಹನಗಳನ್ನು ಬಳಸಿಕೊಳ್ಳುವುದನ್ನು ನಿರುತ್ತೇಜಿಸುವ ಉದ್ದೇಶದಿಂದ ಹಳೆಯ ವಾಹನಗಳ ನೋಂದಣಿ ನವೀಕರಣ ಹಾಗೂ ಫಿಟ್ನೆಸ್ ಪ್ರಮಾಣಪತ್ರದ ನವೀಕರಣ ಶುಲ್ಕಗಳಲ್ಲಿ ಏರಿಕೆಯನ್ನು ಮಾಡಲಾಗಿದೆ ಎಂದು ಸಚಿವಾಲಯದ ಹೇಳಿಕೆ ತಿಳಿಸಿದೆ.


 ಖಾಸಗಿ ವಾಹನಗಳು ಮಾಲಕರು, ತಮ್ಮ 15 ವರ್ಷಕ್ಕಿಂತ ಹಳೆಯದಾದ ವಾಹನಗಳನ್ನು ಪ್ರತಿ 5 ವರ್ಷಕ್ಕೊಮ್ಮೆ ನವೀಕರಣ ಮಾಡಬೇಕಾಗುತ್ತದೆ. ಅದೇ ರೀತಿ ವಾಣಿಜ್ಯ ಬಳಕೆಯ ವಾಹನಗಳಿಗೆ 8 ವರ್ಷಗಳಾದ ಬಳಿಕ ಅವು ತಮ್ಮ ಫಿಟ್ನೆಸ್ ಪ್ರಮಾಣಪತ್ರವನ್ನು ಪಡೆಯುವುದು ಕಡ್ಡಾಯವಾಗಿರುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News